ಚಿಕ್ಕಮಗಳೂರು: ತಾಲೂಕಿನ ಸಿರವಾಸೆ ಗ್ರಾಮದ ಸುಗಡವಾನಿ ಮತ್ತಿತರೆ ಊರುಗಳಲ್ಲಿನ ಜನವಸತಿ ಪ್ರದೇಶ, ಕೃಷಿ ಭೂಮಿಯ ವಿವಿಧ ಸರ್ವೆ ನಂಬರ್ಗಳನ್ನು ಡೀಮ್ಡ್ ಫಾರೆಸ್ಟ್ ಮತ್ತು ೪(೧) ಅಧಿಸೂಚನೆ ಹೊರಡಿಸಿರುವುದನ್ನು ವಿರೋಧಿಸಿ ಆ.೪ ರಂದು ಸಿರವಾಸೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನಾಗರೀಕ ಮತ್ತು ರೈತ ಹೋರಟ ಸಮಿತಿ ಸಂಚಾಲಕ ವಾಸುಪೂಜಾರಿ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಥಳೀಯ ಸಂಘ-ಸಂಸ್ಥೆಗಳು, ಜನಪರ, ದಲಿತ, ಕನ್ನಡಪರ ಸಂಘಟನೆಗಳು, ಕೃಷಿ ಕಾರ್ಮಿಕ, ಕಾಫಿ ಬೆಳೆಗಾರರ ಸಹಯೋಗದಲ್ಲಿ ರೈತ ಹೋರಾಟ ಸಮಿತಿಯು ಈ ಪ್ರತಿಭಟನಾ ಸಮಾವೇಶವನ್ನು ಆಯೋಜಿಸಿದ್ದು, ಬೆಳಗ್ಗೆ ೧೦ ಕ್ಕೆ ಸಿರವಾಸೆಯ ಇಂದಿರಾನಗರದಿಂದ ಗ್ರಾಮಪಂಚಾಯಿತಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ನಂತರ ಸೊಸೈಟಿ ನೂತನ ಸಭಾಂಗಣದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯು ಈಗಾಗಲೇ ಸಿರವಾಸೆ ಗ್ರಾಮದ ವಿವಿಧ ಸರ್ವೆ ನಂಬರ್ಗಳ ಕೃಷಿಯೋಗ್ಯ ಮತ್ತು ಜನವಸತಿ ಪ್ರದೇಶಗಳನ್ನು ಡೀಮ್ಡ್ ಫಾರೆಸ್ಟ್ ಮತ್ತು ೪(೧) ನೊಟೀಸ್ನಲ್ಲಿ ಸೇರ್ಪಡೆ ಮಾಡಿದೆ. ಇದರಿಂದ ೯೪ ಸಿ, ೫೩, ೫೭ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಇ-ಖಾತೆ, ಪೋಡಿ ಆಗುತ್ತಿಲ್ಲ. ವಸತಿರಹಿತರಿಗೆ, ನಿವೇಶನರಹಿತರಿಗೆ ನಿವೇಶನ ಮಂಜೂರಾಗುತ್ತಿಲ್ಲ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಅನುದಾನ ಮಂಜೂರಾಗುತ್ತಿಲ್ಲ ಎಂದು ಹೇಳಿದರು.
ಈ ಸಮಸ್ಯೆಗಳಿಂದ ಆ ಭಾಗದ ಜನಜೀವನವೇ ಮುಂದೆ ಅಪಾಯದಲ್ಲಿ ಸಿಲುಕಲಿದ್ದು, ಈ ಬಗ್ಗೆ ಜನಜಾಗೃತಿ ಮೂಡಿಸಲು ಸರಕಾರದ ಕಣ್ಣು ತೆರೆಸಲು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.
ಸಿರವಾಸೆ ಗ್ರಾಪಂ ಅಧ್ಯಕ್ಷ ರಘುನಾಥ್ ಜಾಥಾಗೆ ಚಾಲನೆ ನೀಡಲಿದ್ದು, ನಾಗರೀಕ ರೈತ ಹೋರಾಟ ಸಮಿತಿ ಸಂಚಾಲಕ ಎಸ್. ವಿಜಯ್ಕುಮಾರ್ ಸಮಾವೇಶ ಉದ್ಘಾಟಿಸಲಿದ್ದಾರೆ. ಜಿ.ರಘು, ಕಾಫಿ ಬೆಳೆಗಾರ ಚಂದ್ರೇಗೌಡ, ಜಾರ್ಜ್ ಆಸ್ಟಿನ್, ಕೆ.ಕೆ. ರಘು ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಗ್ರಾಮಸ್ಥರಾದ ಚಂದ್ರೇಗೌಡ, ಜಾರ್ಜ್ ಆಸ್ಟಿನ್, ನರೇಂದ್ರ ಇದ್ದರು.
Massive protest in Siravase on 4th October
Leave a comment