Home namma chikmagalur ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪ್‌ಸಿಂಗ್
namma chikmagalurchikamagalurHomeLatest News

ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪ್‌ಸಿಂಗ್

Share
Share

ಚಿಕ್ಕಮಗಳೂರು:  ಪರಾಕ್ರಮ-ಆದರ್ಶ ದೇಶಭಕ್ತಿಯ ಪ್ರತೀಕ ಮಹಾರಾಣಾ ಪ್ರತಾಪಸಿಂಗ್ ಎಂದು ಕರ್ನಾಟಕ ರಜಪೂತ ಮಹಾಸಭಾ ನಿರ್ದೇಶಕ ಬೆಂಗಳೂರಿನ ವೀರೇಂದ್ರಸಿಂಗ್ ನುಡಿದರು.

ಜಿಲ್ಲಾ ರಜಪೂತ ಮಂಡಳಿ ನಗರದ ಲಯನ್ಸ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರವೀರ ಮಹಾರಾಣಾ ಪ್ರತಾಪಸಿಂಗ್‌ಜೀ ೪೮೬ನೆಯ ಜಯಂತಿ ಹಾಗೂ ಸಂಘದ ವಾರ್ಷಿಕೋತ್ಸವ ಸಮಾರಂಭವನ್ನು ನಿನ್ನೆ ಉದ್ಘಾಟಿಸಿ ಅವರು ಮಾತನಾಡಿದರು.

ವಾಯುವ್ಯ ಭಾರತದ ರಾಜ್ಯವಾದ ಮೇವಾರವನ್ನು ಆಳುತ್ತಿದ್ದ ಹಿಂದೂ ದೊರೆಯಾದ ಮಹಾರಾಣಾ ಪ್ರತಾಪ್ ಸೂರ್‍ಯವಂಶದ ಕುಡಿ. ಉದಯಸಿಂಗ್ ಮತ್ತು ರಾಣಿ ಜೀವಂತಕನ್ವರ್ ಪುತ್ರನಾಗಿ ೧೫೪೦ರ ಮೇ ೯ರಂದು ಜನಿಸಿದವರು. ಭಾರತದ ಇತಿಹಾಸದಲ್ಲಿ ಧೈರ್‍ಯಶಾಲಿಯೆಂದು ಹೆಸರಾದವರು. ೭ಅಡಿ ಎತ್ತರ ಮತ್ತು ೮೧ ಕೆ.ಜಿ.ತೂಕವುಳ್ಳ ಅಜಾನುಬಾಹು ಸದೃಢರಾಜ. ಮೊಗಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ಧೀಮಂತ ಎಂದವರು ಬಣ್ಣಿಸಿದರು.

ದಟ್ಟವಾದ ಕಾಡು, ಬೆಟ್ಟ ಗುಡ್ಡಗಳು, ವನ್ಯಜೀವಿ, ಆರು ನದಿಗಳನ್ನೊಳಗೊಂಡ ಮೇವಾರ ಪ್ರದೇಶದಿಂದ ದಕ್ಷಣಕ್ಕೆ ವಲಸೆ ಬಂದಿರುವ ರಜಪೂತರಿಗೆ ಮಹಾರಾಣಾ ಆದರ್ಶ ಪುರುಷ. ಅತಿ ಕಡಿಮೆ ಸಂಖ್ಯೆಯಲ್ಲಿರುವ ರಜಪೂತರು ಸ್ವಾಭಿಮಾನಿಗಳು. ಅತಿ ಹಿಂದುಳಿದ ಸೌಲಭ್ಯವಂಚಿತ ಸಮುದಾಯ ಇದಾಗಿದ್ದು ಧೀರ್ಘಕಾಲ ಆಡಳಿತಗಾರರ ನಿರ್ಲಕ್ಷ್ಯಗೆ ತುತ್ತಾಗಿದೆ ಎಂದು ವಿಷಾದಿಸಿದ ವೀರೇಂದ್ರಸಿಂಗ್, ಹಿಂದುಳಿದವರ್ಗಗಳ ವ್ಯಾಪ್ತಿಗೆ ಸೇರಲ್ಪಟ್ಟಿರುವ ರಜಪೂತರಿಗೆ ಸೌಕರ್‍ಯ-ಸೌಲಭ್ಯಗಳು ಗಗನಕುಸುಮವಾಗಿದೆ ಎಂದರು.

ಬಿ.ಸಿ.ಎಂ. ಅಭಿವೃದ್ಧಿಗೆ ಸರ್ಕಾರ ಕೋಟ್ಯಾಂತರ ರೂ. ಪ್ರತಿವರ್ಷ ವೆಚ್ಚ ಮಾಡುತ್ತಿದ್ದರೂ ಅದೆಲ್ಲವೂ ಕೇವಲ ಐದು ಜಾತಿಗಳಿಗೆ ಮಾತ್ರ ಸಿಗುತ್ತಿದೆ. ಸಾಲ ಸೌಲಭ್ಯ, ಶಿಕ್ಷಣಕ್ಕೆ ನೆರವು, ಸಹಾಯಧನ, ಕೌಶಲ್ಯ ಅಭಿವೃದ್ಧಿ ನೆರವು ಸೇರಿದಂತೆ ಬಿಸಿಎಂ ಅಭಿವೃದ್ಧಿ ಮಂಡಳಿಯ ಯೋಜನೆಗಳನ್ನು ಬಳಕೆ ಮಾಡಿಕೊಳ್ಳಬೇಕು ಎಂದ ವೀರೇಂದ್ರಸಿಂಗ್, ನಾವು ಅಂಕಿ-ಅಂಶಗಳೊಂದಿಗೆ ಸಂಘಟಿತರಾಗಿ ನೆರವು ಕೋರದಿದ್ದರೆ ಯಾರೂ ನಮ್ಮ ಬಳಿಗೆ ಬಂದು ಸಹಾಯ ಮಾಡುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕೆಂದರು.

ಜಿ.ಪಂ.ಮಾಜಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಮುಖ್ಯಅತಿಥಿಗಳಾಗಿ ಮಾತನಾಡಿ ಭಾರತವನ್ನು ಅನೇಕ ರಾಜವಂಶಸ್ಥರು ಆಳಿದ್ದಾರೆ. ಛಲ, ಪರಾಕ್ರಮ, ವೀರತ್ವದಲ್ಲಿ ರಜಪೂತರದ್ದು ಸಿಂಹಪಾಲು. ಸುಮಾರು ೪೦೦ವರ್ಷಗಳ ಕಾಲ ಉತ್ತರದಲ್ಲಿ ಆಳ್ವಿಕೆಮಾಡಿ ವಿದೇಶಿಯರ ಧಾಳಿಯನ್ನು ತಡೆದ ಹಿರಿಮೆ ಇವರದು. ಸಾಹಸ, ಉತ್ತಮ ಆಡಳಿತ, ನಂಬಿದ ಪ್ರಜೆಗಳ ರಕ್ಷಣೆಗೆ ಮಹಾರಾಣಾ ಮಾದರಿ. ಅವರ ಜೀನ್ಸ್ ರಜಪೂತರಲ್ಲಿ ಮುಂದುವರೆದಿದೆ. ಹಿರಿಮೆ-ಗರಿಮೆ ಅರಿತು ಬದುಕು ಕಟ್ಟಿಕೊಳ್ಳಲು ಇಂತಹ ಜಯಂತಿ ಕಾರ್‍ಯಕ್ರಮಗಳು ಯುವಪೀಳಿಗೆಗೆ ಆದರ್ಶ ಎಂದರು.

ಹಿಂದೂ ಜಾಗರಣವೇದಿಕೆ ರಾಜ್ಯಸಮಿತಿ ಸದಸ್ಯ ಹೊಸಕೋಟೆಯ ನಂದರಾಮಸಿಂಗ್ ಮಾತನಾಡಿ ಶೌರ್‍ಯದಿಂದ ಮೊಗಲರ ಧಾಳಿಯನ್ನು ಹಿಮ್ಮೆಟಿಸಿದ ಮಹಾರಾಣಾ ನಮಗೆಲ್ಲ ಪ್ರೇರಣಾದಾಯಕರು. ೨೭ವರ್ಷದ ತರುಣ ೧೫೫೭ರಿಂದ ೩೦ವರ್ಷ ಸತತ ಯುದ್ಧ ಮಾಡಿದ ವೀರ. ಹಳದಿಘಾಟ್ ಯುದ್ಧದಲ್ಲಿ ಮೊಘಲರ ಲಕ್ಷ ಸೈನಿಕರ ಸೇನೆಯನ್ನು ಕೇವಲ ೨೨,೦೦೦ ಸೈನಿಕರೊಂದಿಗೆ ಎದುರಿಸಿದ ಧೀಮಂತ. ೧೫೯೮ರಲ್ಲಿ ಪ್ರತಾಪ್ ಪ್ರಾಣತ್ಯಾಗ ಮಾಡಿದಾಗ ಶತ್ರುರಾಜ ಅಕ್ಬರ್ ಕಣ್ಣೀರು ಮಿಡಿದ ಎಂದ ನಂದರಾಮ, ಭಾರತದ ಇತಿಹಾಸದಲ್ಲಿ ಮಹಾರಾಣಾರ ಪರಾಕ್ರಮದ ಉಲ್ಲೇಖ ಕಡಿಮೆ. ಸ್ವಾತಂತ್ರ್ಯದ ನಂತರ ದೇಶವನ್ನು ಆಳಿದ ಸರ್ಕಾರದಲ್ಲಿ ೨೦ವರ್ಷಕ್ಕಿಂತ ಹೆಚ್ಚು ಕಾಲ ಶಿಕ್ಷಣ ಸಚಿವರಾಗಿದ್ದವರು ನಮ್ಮ ಪರಂಪರೆಯ ಇತಿಹಾಸ ಚರಿತ್ರೆಯ ಬಗ್ಗೆ ಕಾಳಜಿ-ಗೌರವ ಇಲ್ಲದ ಮುಸಲ್ಮಾನ ವ್ಯಕ್ತಿಗಳೆಂಬುದು ವಿಷಾದನೀಯ ಎಂದರು.

ಜಿಲ್ಲಾ ರಜಪೂತ ಮಂಡಳಿ ಅಧ್ಯಕ್ಷೆ ಹೇಮಾವತಿ ರಾಜುಸಿಂಗ್ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ೧೫೦ಕ್ಕಿಂತ ಕಡಿಮೆ ಕುಟುಂಬಗಳಿರುವ ರಜಪೂತರು ಮೂರ್‍ನಾಲ್ಕು ದಶಕಗಳಿಂದ ಸಂಘಟಿತರಾಗಿ ಚಿಕ್ಕಪುಟ್ಟ ಸಭೆ ಸಮಾರಂಭಗಳನ್ನು ನಡೆಸಲಾಗುತ್ತಿದೆ. ಸಂಘಕ್ಕೆ ಸ್ವಂತ ನಿವೇಶನ-ಕಟ್ಟಡ ಅಗತ್ಯವಿದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ವೀರಯೋಧ ಮಳಲೂರಿನ ಸುಬೇದಾರ್ ಮಂಜುನಾಥಸಿಂಗ್‌ರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ೨೬ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕಾರ್‍ಯನಿರ್ವಹಿಸುತ್ತಿದ್ದು, ಪ್ರಸ್ತುತ ಕಾಶ್ಮೀರದಲ್ಲಿ ವರ್ಗಾವಣೆ ಆಗಿದೆ. ಮಿಸೈಲ್ ಆಪರೇಟರ್ ಆಗಿದ್ದು ಈಗಿನ ಆಪರೇಷನ್ ಸಿಂಧೂರ ಜೊತೆಗೆ ಹಿಂದಿನ ಕಾರ್ಗೀಲ್ ಯುದ್ಧ, ವಿಜಯ ಕಾರ್‍ಯಾಚರಣೆಗಳಲ್ಲಿ ಪಾಲ್ಗೊಂಡು ಅದೃಷ್ಟವಂತ ತಾವೆಂದ ಮಂಜುನಾಥಸಿಂಗ್, ವಿಶ್ವ ೩ನೆಯ ಮಹಾಯುದ್ಧದತ್ತ ಮುಖಮಾಡಿದೆ ಎಂದರು.

ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ ಪರಿಸರ ಸಂರಕ್ಷಣೆ ಕುರಿತಂತೆ ಉಪನ್ಯಾಸ ನೀಡಿದರು. ತಿಪಟೂರಿನ ನಗರಸಭಾ ಸದಸ್ಯ ಲೋಕನಾಥಸಿಂಗ್ ಮಾತನಾಡಿದರು. ಶಾಲಾ-ಕಾಲೇಜು ಮಕ್ಕಳಿಗೆ ಕಾಲೂಸಿಂಗ್ ಪುಸ್ತಕ, ಆಟೋಟಸ್ಪರ್ಧಾ ವಿಜೇತರಿಗೆ ಚಂದ್ರಕಲಾ ಹರಿಸಿಂಗ್ ಬಹುಮಾನ ವಿತರಿಸಿದರು.

ಜಿಲ್ಲಾ ರಜಪೂತ ಮಂಡಳಿ ಕಾರ್‍ಯದರ್ಶಿ ಹರೀಶಸಿಂಗ್ ವಾರ್ಷಿಕವರದಿ ಮಂಡಿಸಿದ್ದು, ಖಜಾಂಚಿ ಹರಿಸಿಂಗ್ ಸ್ವಾಗತಿಸಿ, ಚೈತ್ರಾ ವಂದಿಸಿದರು. ಸಂಘಟನಾಕಾರ್‍ಯದರ್ಶಿ ಗೀತಾಪ್ರಕಾಶ ಕಾರ್‍ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಭೀಮಸಿಂಗ್, ನಿರ್ದೇಶಕರಾದ ಶಂಕರಸಿಂಗ್, ಧರ್ಮಸಿಂಗ್, ನೇಮಸಿಂಗ್, ಗೋವಿಂದಸಿಂಗ್, ಶೇಖರಸಿಂಗ್ ಮಹಾರಾಣಾ ಪ್ರತಾಪಸಿಂಗ್‌ರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

Maharana Pratap Singh the symbol of patriotism

Share

Leave a comment

Leave a Reply

Your email address will not be published. Required fields are marked *

Don't Miss

ಗಿರಿ ಪ್ರದೇಶದ ಪ್ರವಾಸೋದ್ಯಮ ಸ್ಥಳಗಳಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು: : ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರು ಮತ್ತು ಸ್ಥಳೀಯ ಜನತೆಯ ಹಿತದೃಷ್ಟಿಯಿಂದ ಗಿರಿ ಪ್ರದೇಶದ ಕೆಲವು ಪ್ರವಾಸೋದ್ಯಮ ಸ್ಥಳಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅವರು ತಿಳಿಸಿದರು. ಜಿಲ್ಲಾಧಿಕಾರಿಗಳ...

ದೇವನಹಳ್ಳಿ 1,777 ಎಕರೆ ಭೂ ಸ್ವಾಧೀನ ನೋಟಿಫಿಕೇಶನ್ ರದ್ದು

ಬೆಂಗಳೂರು: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಸುತ್ತಮುತ್ತಲಿನ ಒಟ್ಟ 13 ಹಳ್ಳಿಗಳ 1,777 ಎಕರೆ ಭೂ ಸ್ವಾಧೀನ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿದೆ. ಇಂದು ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ  ನೇತೃತ್ವದಲ್ಲಿ ನಡೆದ ರೈತರು,...

Related Articles

ರೈತ ಸಂಘಟನೆ ದಾರಿ ಬಿಟ್ಟಿತು ? ಎಲ್ಲಿಗೆ ಪಯಣ ಯಾವುದೋ ದಾರಿ !

ಮಾಸದಿರಲಿ ಬದಲಾಯಿಸದಿರಲಿ ರೈತರ ಹೆಗಲ ಮೇಲೇರಿರುವ ಶಾಲಿನ ಹಸಿರು ಬಣ್ಣ. ದೇಶಕ್ಕೆ ಅನ್ನ ಕೊಡುವ ರೈತ...

ದತ್ತು ಸಂಸ್ಥೆಯ ಸಿಬ್ಬಂದಿ ಆಯಾ ಅಮಾನತು

ಚಿಕ್ಕಮಗಳೂರು: ನಗರದ ದತ್ತು ಸಂಸ್ಥೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಒಂದು ವರ್ಷ ಮೂರು ತಿಂಗಳ ಹೆಣ್ಣುಮಗು ಸುಟ್ಟ...

ವೈದ್ಯ ಇಲ್ಲದ ಕಳಸ ತಾಲೂಕು ಆಸ್ಪತ್ರೆ

ಚಿಕ್ಕಮಗಳೂರು: ಕಳಸ ತಾಲೂಕು ಆಸ್ಪತ್ರೆಯಲ್ಲಿ ಓರ್ವ ವೈದ್ಯರೂ ಇಲ್ಲದೆ ಜನರು ಚಿಕಿತ್ಸೆಗೆ ಪರದಾಡುವಂತಾಗಿದೆ. ಸುತ್ತಮುತ್ತಲಿನ ಗ್ರಾಮಸ್ಥರು...

ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪ್ರತಿಭಾ ಪುರಸ್ಕಾರ

ಚಿಕ್ಕಮಗಳೂರು: ವಿದ್ಯಾರ್ಥಿಗಳು ದೃಢ ಆತ್ಮವಿಶ್ವಾಸ, ಉತ್ತಮ ನಡವಳಿಕೆಯನ್ನು ಮೈಗೂಡಿಸಿಕೊಳ್ಳ ಬೇಕೆಂದು ಜಿಲ್ಲಾಪೊಲೀಸ್ ಮುಖ್ಯಾಧಿಕಾರಿ ಡಾ.ವಿಕ್ರಮ್ ಅಮಟೆ...