ಚಿಕ್ಕಮಗಳೂರು: ಹೆಗ್ಡೆವಾರ, ಗೋಳ್ವಾಳ್ಕರ್, ಸಾವರ್‌ಕರ್, ಗಾಂಧಿಹಂತಕ ನಾಥರಾಮ ಗೋಡ್ಸೆ ವಿಚಾರಧಾರೆಗಳ ಬೆಂಬಲಿತ ಬಂಚ್ ಆಫ್ ಥಾಟ್ಸ್ ಕೃತಿಯಲ್ಲಿ ಸಂಘ ರೂಪ ದರ್ಶನದ ಸಂವಿಧಾನವನ್ನು ಅನುಷ್ಟಾನಗೊಳಿಸುವ ತಂತ್ರಗಾರಿಕೆ, ಹಿಂಸೆಯನ್ನು ಪ್ರತಿಪಾದಿಸುವ ಸಂಘದ ವಿಚಾರ ಧಾರೆಯನ್ನು ಅನುಷ್ಠಾನ ಗೊಳಿಸುವ ಕೇಂದ್ರದ ಬಿ.ಜೆ.ಪಿ. ಸರ್ಕಾರವನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಮಾಜಿ ಸಚಿವ ಕಿಮ್ಮನ ರತ್ನಾಕರ್‌ಹೇಳಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿ ನೇತೃತ್ವದ ಕೇಂದ್ರದ ಬಿ.ಜೆ.ಪಿ. ಸರ್ಕಾರದ ಆಡಳಿತ ಮತ್ತು ಆರ್ಥಿಕ ನೀತಿ, ಶ್ರೀಮಂತರನ್ನು ಅತೀ ಶ್ರೀಮಂತರನ್ನು ಮಾಡುವ ಮತ್ತು ಮಧ್ಯಮ ವರ್ಗದವರನ್ನ ಬಡವರನ್ನಾಗಿ ಮಾಡಿ, ಬಡವರನ್ನು ಕಡುಬಡವರನ್ನಾಗಿಸಿ ಮತ್ತು ನಿರ್ಗತಿಕರನ್ನಾಗಿ ಮಾಡುವ ನೀತಿಯನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದರು.
ಕಾಂಗ್ರೆಸ್ ಸರ್ವರನ್ನು ಎಲ್ಲ ಜಾತಿ, ಧರ್ಮದವರನ್ನು ಒಳಗೊಳ್ಳುವ, ಶಾಂತಿ ನೆಮ್ಮದಿಯ, ಅಹಿಂಸೆಯ, ಜಾತ್ಯಾತೀತ, ಬಹುತ್ವದ ಭಾರತವನ್ನು ಕಟ್ಟುವ ಮತ್ತು ದೇಶದಲ್ಲಿನ ಸಾಮಾಜಿಕ ಅಸಮಾನತೆ ಮತ್ತು ಶೈಕ್ಷಣಿಕ ಅಸಮಾನತೆಯನ್ನು ತೆಗೆದು ಹಾಕಿ, ಸಹಬಾಳ್ವೆಯ ವಾತಾವರಣವನ್ನು ನಿರ್ಮಿಸುವುದು ಕಾಂಗ್ರೆಸ್ ಪಕ್ಷದ ಮೂಲತತ್ವ.ಎಂದರು.
ಬಿಜೆಪಿ ತನ್ನ ಮೂಲ ಸಿದ್ಧಾಂತವನ್ನು ಜನರಿಗೆ ತಿಳಿಸುತ್ತಿಲ್ಲ. ಬಿಜೆಪಿ ಮೂಲ ಸಿದ್ದಾಂತದ ಪ್ರಕಾರ ಹರಿಜನರು ಹಿಂದುಗಳೋ ಅಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮಾಜಿ ಸಚಿವ ಕಿಮ್ಮನ ರತ್ನಾಕರ್ ಸವಾಲು ಹಾಕಿದರು. ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಹರಿಜನರು ಹಿಂದುಗಳಲ್ಲ ಎಂಬ ಉಲ್ಲೇಖ ಮಾಡಿದ್ದಾರೆ. ಈ ಪುಸ್ತಕವೇ ಅವರ ಪರಮೋಚ್ಚ ಪುಸ್ತಕವಾಗಿದೆ. ಈ ಬಗ್ಗೆ ಬಿಜೆಪಿಯವರು ಮಾತನಾಡಲಿ, ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಬಿಜೆಪಿ ತನ್ನ ಮೂಲ ಸಿದ್ಧಾಂತವನ್ನು ಜನರಿಗೆ ಹೇಳುತ್ತಿಲ್ಲ. ದೇಶದಲ್ಲಿ ೧೯ ಸಾವಿರ ಭಾಷೆ ೪ ಸಾವಿರ ಜಾತಿ ಹಾಗೂ ಒಂಭತ್ತಕ್ಕೂ ಹೆಚ್ಚು ಧರ್ಮಗಳಿವೆ. ಆದರೆ ಪ್ರಾಂತಿಯ ಭಾಷೆಗಳನ್ನು ಅಳಿಸುವ ಪ್ರಸ್ತಾಪವೂ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲ ಜಾತಿ ಧರ್ಮದವರು ಒಂದಾಗಿ ಬದುಕಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ ಬಿಜೆಪಿಯ ಈ ಪುಸ್ತಕದಲ್ಲಿ ಒಂದು ದೇಶ, ಒಂದು ಆಡಳಿತ, ಒಂದು ಭಾಷೆ ಎಂದು ಹೇಳುತ್ತಾರೆ. ಸಂಸ್ಕೃತ ಪ್ರಮುಖ ಭಾಷೆಯಾದರೆ, ಹಿಂದಿ ಸಂವಹನ ಭಾಷೆಯಾಗಬೇಕು ಎಂದು ಇದೇ ಪುಸ್ತಕದಲ್ಲಿ ಹೇಳಲಾಗಿದೆ. ಇದು ಸ್ಥಳೀಯ ಯಾವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೂ ತಿಳಿದಿಲ್ಲ. ಹೀಗಾಗಿ ನಾನು ಸ್ಥಳೀಯ ಬಿಜೆಪಿ ಮುಖಂಡರ ಬಗ್ಗೆ ಮಾತನಾಡುವುದಿಲ್ಲ ಎಂದರು.
ವಿಶ್ವಗುರು ಎಂಬ ಪಟ್ಟ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿದೆ. ಏಕಾಏಕಿ ವಿಶ್ವಗುರು ಎಂಬ ಪದ ಹುಟ್ಟಿಕೊಳ್ಳಲು ಸಾಧ್ಯವಿಲ್ಲ. ವಿಶ್ವಗುರು ಎಂಬ ಉಲ್ಲೇಖವು ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿದೆ. ನವಿಲಿಗೆ ಕಾಳು ಹಾಕುವುದು ಸೇರಿದಂತೆ ಹಲವು ವಿಚಾರಗಳು ಇದೇ ಪುಸ್ತಕದಲ್ಲಿವೆ. ಈ ಬಗ್ಗೆ ಚರ್ಚೆಗೆ ಯಾವುದೇ ಬಿಜೆಪಿ ಮುಖಂಡರು ಮುಂದೆ ಬರುವುದಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ನಟ ಅಕ್ಷಯ್ ಕುಮಾರ್ ಜೊತೆಗೆ ಮಾತ್ರ ಸಂವಾದ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಭಾರತ ಪ್ರಜಾಪ್ರಭುತ್ವ ದೇಶ. ಆದರೆ ಭಾರತಕ್ಕೆ ಸ್ವತಂತ್ರ ಬಂದು ೫೨ ವರ್ಷದವರೆಗೂ ಆರ್ ಎಸ್ ಎಸ್ ತನ್ನ ಕೇಂದ್ರ ಕಚೇರಿ ನಾಗಪುರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿರಲಿಲ್ಲ. ಇನ್ನು ವಿಶೇಷ ಎಂದರೆ ಆರ್ ಎಸ್ ಎಸ್ ಗೆ ಇದುವರೆಗೆ ಚುನಾವಣೆಯೇ ನಡೆದಿಲ್ಲ. ಹೀಗಿರುವಾಗ ಬಿಜೆಪಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ಹಾಸ್ಯಸ್ಪದವಾಗಿದೆ ಎಂದು ಲೇವಡಿ ಮಾಡಿದರು.
ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಸಂಘ ಪರಿವಾರದ ವಿಚಾರಧಾರೆಗಳನ್ನು ಬಿಜೆಪಿ ಯಾವುದೇ ಮುಖಂಡರು ವಿರೋಧಿಸದಿರುವುದುದುರಾದೃಷ್ಟಕರ ಎಂದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾರಾಯಣ ರಾವ್, ಹನೀಫ್, ಹಿರೇಗೌಜ ಶಿವಕುಮಾರ್, ಪ್ರವೀಣ್ ಬೆಟಗೆರೆ ಮತ್ತಿತರರಿದ್ದರು.
Kimman Ratnakar’s objection to the work Bunch of Thoughts
Leave a comment