ಚಿಕ್ಕಮಗಳೂರು: ಬೆಂಗಳೂರು ನಗರ ನಿರ್ಮಾಣಕ್ಕೆ ನಾಡಪ್ರಭು ಕೆಂಪೇಗೌಡರ ಕೊಡುಗೆ ಅಪಾರ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
೧೬ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಆಡಳಿತ ಕಾಲದಲ್ಲಿದ್ದಂತೆ ಬೆಂಗಳೂರು ನಗರವನ್ನು ನಿರ್ಮಿಸಬೇಕೆಂಬ ದೂರದೃಷ್ಟಿ ಇಟ್ಟುಕೊಂಡಿದ್ದರು. ತಮ್ಮದೇ ಆದ ಕೊಡುಗೆ ನೀಡಿ ಈ ನಗರವನ್ನು ನಿರ್ಮಿಸಿ ತಮ್ಮ ಕನಸಿನ ನಗರಿಯನ್ನಾಗಿ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅವರು ಕಟ್ಟಿದ ಕೆರೆಗಳು. ರಸ್ತೆಗಳು, ಮಾರುಕಟ್ಟೆ ವ್ಯವಸ್ಥೆ ಇಂದಿಗೂ ನಮ್ಮ ಬೆಂಗಳೂರಿಗೆ ವಿಶೇಷ ಮೆರುಗು ತಂದುಕೊಟ್ಟಿವೆ. ಬೆಂಗಳೂರನ್ನು ಸಿಲಿಕಾನ್ ವ್ಯಾಲಿ ಆಫ್ ದಿ ವರ್ಲ್ಡ್ ಎಂದು ಕರೆದರೂ ತಪ್ಪಾಗಲಾರದು. ಈ ರೀತಿ ಬೃಹದಾಕಾರದಲ್ಲಿ ಬೆಳೆಯಲು ಹಾಗೂ ಈ ನಗರ ಇಂದು ವಿಶ್ವಮಾನ್ಯತೆ ಪಡೆಯಲು ಅವರು ಹಾಕಿಕೊಟ್ಟ ಮೇಲ್ಪಂಕ್ತಿಯೇ ಕಾರಣ ಎಂದರು.
ಇಂದು ಸುಭದ್ರವಾದ ಬೆಂಗಳೂರು ನಿರ್ಮಾಣದ ಜೊತೆಗೆ ಜನಪರ ಕಾರ್ಯಕ್ರಮಗಳನ್ನು ಕೈಗೊಂಡರು. ಬಾಲ್ಯದಲ್ಲಿ ಚುರುಕಾಗಿಯೇ ಇದ್ದ ಅವರು ಗುರುಕುಲದಲ್ಲಿ ಸಾಮಾನ್ಯ ಶಿಕ್ಷಣದ ಜೊತೆಗೆ ರಾಜ ನೀತಿ, ಆರ್ಥಿಕ ತಿಳುವಳಿಕೆ, ಕುಸ್ತಿ, ಯುದ್ಧ ಕಲೆಗಳನ್ನು ಕಲಿತಿದ್ದರು. ವಿಜಯನಗರದ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಿರಿಯನ್ನು ಕಣ್ಣಾರೆ ಕಂಡಿದ್ದ ಅವರು ಎಲ್ಲ ವೈಭವಗಳನ್ನು ಪುನರ್ ಪ್ರತಿಷ್ಠಾಪಿಸುವ ಬಯಕೆ ಹೊಂದಿದ್ದರು. ರಾಜಧಾನಿ ಕಟ್ಟಿದ ನಂತರ ಅಲ್ಲಿ ನಾಲ್ಕು ಮಹಾದ್ವಾರಗಳನ್ನು ರಚಿಸಿದರು ಎಂದು ಹೇಳಿದರು. ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಅವರ ವೃತ್ತಿಗನುಸಾರವಾಗಿ ಅಕ್ಕಿಪೇಟೆ, ರಾಗಿಪೇಟೆ, ಕುಂಬಾರಪೇಟೆ, ಬಳೆಪೇಟೆ ಹೀಗೆ ಅನೇಕ ಪೇಟೆಗಳನ್ನು ನಿರ್ಮಿಸಿದರು ಎಂದು ತಿಳಿಸಿದರು.
ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾಡ ಪ್ರಭು ಕೆಂಪೇಗೌಡರು ಉತ್ತಮ ಕೃಷಿ ಚಟುವಟಿಕೆಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಲವಾರು ಕೆರೆಗಳನ್ನು ನಿರ್ಮಿಸಿದರು. ಧಾರ್ಮಿಕತೆಗೆ ಪ್ರತೀಕವಾಗಿ ದೇವಸ್ಥಾನಗಳನ್ನು ಕಟ್ಟಿಸಿದರಲ್ಲದೇ ವಿವಿಧ ಉದ್ಯಾನವನಗಳನ್ನು ನಿರ್ಮಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಬೆಂಗಳೂರನ್ನು ಜಾಗತಿಕವಾಗಿ ಗುರುತಿಸಲು ಕೆಂಪೇಗೌಡರ ಕೊಡುಗೆ ಅವಿಸ್ಮರಣೀಯವಾದದ್ದು. ನಾಡಪ್ರಭು ಕೆಂಪೇಗೌಡರ ಆದರ್ಶಗಳು ಇಂದು ನಮಗೆಲ್ಲರಿಗೂ ದಾರಿ ದೀಪವಾಗಿವೆ ಎಂದು ತಿಳಿಸಿದ ಅವರು ಇಂದು ವಿಶ್ವ ಭೂಪಟದಲ್ಲಿ ಬೆಂಗಳೂರು ರಾರಾಜಿಸುತ್ತಿರುವುದಕ್ಕೆ ಕೆಂಪೇಗೌಡರ ದೂರದೃಷ್ಟಿಯೇ ಕಾರಣ ಎಂದು ಹೇಳಿದರು.
ಬಸವನಹಳ್ಳಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಡಾ.ಎಚ್.ಎಸ್.ಸತ್ಯನಾರಾಯಣ ಉಪನ್ಯಾಸ ನೀಡಿ, ಮಾನವ ಸಂಪನ್ಮೂಲವೇ ಒಂದು ನಾಡಿನ ಅತ್ಯಮೂಲ್ಯ ಸಂಪನ್ಮೂಲ ಎಂದು ಅರಿತಿದ್ದ ಕೆಂಪೇಗೌಡರು, ನಾಡಿನ ಕುಶಲಕರ್ಮಿಗಳ ಕೌಶಲವನ್ನು ದೇಶದ ಒಳಿತಿಗೆ ಹಾಗೂ ಪ್ರಗತಿಗೆ ಬಳಸಿದಾಗ ದೇಶವು ಪ್ರಗತಿಯ ಪಥದಲ್ಲಿ ಸಾಗುತ್ತದೆ ಎಂದು ಮನಗಂಡಿದ್ದರು. ಹೀಗಾಗಿಯೇ, ತಮ್ಮ ಕಾಲಮಾನದ ಎಲ್ಲ ಕ್ಷೇತ್ರದ ಅತ್ಯುತ್ತಮ ಪ್ರತಿಭೆಗಳನ್ನು ಗುರುತಿಸಿ ಆಶ್ರಯ ನೀಡಿದರು. ಅವರ ದೂರದೃಷ್ಟಿಯ ಫಲದಿಂದಾಗಿಯೇ ಬೆಂಗಳೂರಿಗೆ ಜಾಗತಿಕ ಮಟ್ಟದಲ್ಲಿ ‘ಸಿಲಿಕಾನ್ ಸಿಟಿ’ ಎಂಬ ಅಭಿದಾನ ದಕ್ಕಿತು ಎಂದರು.
ಅಪ್ರತಿಮ ಕರ್ತೃತ್ವ ಶಕ್ತಿ ಹೊಂದಿದ್ದ ಧೀಮಂತ ನಾಯಕರಾದ ಅವರು, ಪ್ರಾಚೀನ ಕಾಲದಿಂದಲೂ ವಾಣಿಜ್ಯ ಪಥಗಳು ಸಾಗುತ್ತಿದ್ದ ಭೌಗೋಳಿಕವಾಗಿ ಆಯಕಟ್ಟಿನ ಪ್ರದೇಶದಲ್ಲಿ ಬೆಂಗಳೂರು ನಿರ್ಮಿಸಿದರು. ಕ್ರಿ.ಶ. ೧೫೩೭ರಲ್ಲಿ ಕೆಂಪೇಗೌಡರು ‘ದೇವರಾಯಪಟ್ಟಣ’ ಎಂಬ ಹೆಸರಿನಲ್ಲಿ ಉತ್ಪಾದನೆ ಮತ್ತು ವಾಣಿಜ್ಯ ಕೇಂದ್ರವಾಗಿ ರೂಪಿಸಿದ ತಮ್ಮ ಹೊಸ ರಾಜಧಾನಿ ಬೆಂಗಳೂರು ನಗರವನ್ನು ಕಟ್ಟಿ, ಅದಕ್ಕೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಗುಡಿ ಗೋಪುರಗಳನ್ನು ನಿರ್ಮಿಸಿದರು. ನಗರದ ಸುತ್ತ ಕಂದಕವುಳ್ಳ ಮಣ್ಣಿನ ಕೋಟೆ ನಿರ್ಮಿಸಿ, ಅದರ ಎಲ್ಲ ದಿಕ್ಕಿನಲ್ಲಿ ಕೆರೆಗಳನ್ನು ಕಟ್ಟಿಸಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿದರು. ಕುಶಲಕರ್ಮಿಗಳಿಗೆ ಅಗತ್ಯವಾದ ವೈವಿಧ್ಯಮಯ ವಸ್ತುಗಳ ಉತ್ಪಾದನೆ ಮತ್ತು ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು ನಗರದ ಅಭಿವೃದ್ಧಿಗೆ ಕಾರಣವಾಯಿತು ಎಂದು ಹೇಳಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ನಗರಸಭೆ ಹಂಗಾಮಿ ಅಧ್ಯಕ್ಷೆ ಅನು ಮಧುಕರ್, ಕುವೆಂಪು ಕಲಾ ಸೇವಾ ಸಂಘದ ಅಧ್ಯಕ್ಷ ಕೆ.ಮೋಹನ್, ಮುಖಂಡರಾದ ಕೆ.ಟಿ.ರಾಧಾಕೃಷ್ಣ, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ತಹಸೀಲ್ದಾರ್ ರೇಷ್ಮಾಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
Kempegowda’s leadership is the reason Bangalore gained global recognition
Leave a comment