ಚಿಕ್ಕಮಗಳೂರು: ಕ್ರೀಡಾಸಕ್ತಿ ಕೇವಲ ಶಾಲಾವಧಿಯಲ್ಲಿ ಮಾತ್ರ ಇರದೆ ಜೀವನ ಪರ್ಯಂತ ಇರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಕರೆನೀಡಿದರು.
ಅವರು ಇಂದು ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ದಂಟರಮಕ್ಕಿ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಸಬಾ-೩ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೫-೨೬ ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ, ಖೋಖೋ ಮುಂತಾದ ದೈಹಿಕ ಶ್ರಮದ ಆಟಗಳನ್ನು ಆಡುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದ ಅವರು, ಎಲ್ಲಾ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಕ್ರೀಡಾಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆನೀಡಿದರು.
ಮಗು ಊಟ ಮಾಡುವುದಿಲ್ಲವೆಂದು ವೈದ್ಯರ ಬಳಿ ದೂರು ಹೇಳುವವರು ಹೆಚ್ಚಾಗಿದ್ದಾರೆ. ನಾವು ಚಿಕ್ಕವರಾಗಿದ್ದಾಗ ಊಟ ಹಾಕಿಕೊಟ್ಟರೆ ಸಾಕು ಎಂದು ಖಾಲಿಮಾಡಿ ತಟ್ಟೆ ಬಡಿಯುತ್ತಿದ್ದೆವು. ಕಾರಣ ಬೆಳಗ್ಗೆ ಎದ್ದು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದೆವು ಎಂದು ಹಿಂದಿನ ವಿದ್ಯಾರ್ಥಿ ಜೀವನದ ಮೆಲುಕು ಹಾಕಿದರು.
ದೈಹಿಕ ಶ್ರಮದ ಕೆಲಸವನ್ನು ಮಾಡುವ ಮೂಲಕ ಹೆಚ್ಚು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದ ಅವರು, ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಆಯೋಜಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿದರು.
ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ೧ ರಿಂದ ೧೧ ವಲಯ ಮಟ್ಟದ ಕ್ರೀಡಾಪಟುಗಳಿಗೆ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ. ಬಿಇಓ ಮತ್ತು ಶಿಕ್ಷಣ ಸಂಯೋಜಕರು ತುಂಬಾ ಬೆಂಬಲ ನೀಡಿ ಬೆನ್ನು ತಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಪ್ರತಿದಿನ ಚಟುವಟಿಕೆ ಮತ್ತು ಸಂತಸದಿಂದ ಇದ್ದಾಗ ಮಾತ್ರ ಎಲ್ಲರೂ ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದ ಅವರು, ಈ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.
ದೈಹಿಕ ಶಿಕ್ಷಕರು ಮಳೆ, ಚಳಿ ಎನ್ನದೆ ಕ್ರೀಡಾಕೂಟ ಆಯೋಜನೆ ಮಾಡಿ ಪರಿಶ್ರಮ ವಹಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಜೊತೆಗೆ ಇಲಾಖೆಗೆ ಶ್ರೇಯೋಭಿವೃದ್ಧಿ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಜ್ಜಯ್ಯ, ಕಾರ್ಯದರ್ಶಿ ರವಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾಯಾಧ್ಯಕ್ಷ ಸುಂದರೇಶ್, ಕಿರಣ್ ಕುಮಾರ್, ಜಾನಕಮ್ಮ, ಸುಂದರೇಶ್, ಅರಸು, ಪೂರ್ಣೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ, ಮುಖ್ಯ ಶಿಕ್ಷಕಿ ರುಕ್ಸಾನ ಉಪಸ್ಥಿತರಿದ್ದರು. ಶಂಕರ್ ಸ್ವಾಗತಿಸಿ ಕುಮಾರ ಸ್ವಾಮಿ ವಂದಿಸಿದರು.
Kasaba-3 Zone Level Higher Primary Schools Sports Meet
Leave a comment