ಚಿಕ್ಕಮಗಳೂರು: ಜಿಲ್ಲೆಯ ಕಾಡಂಚಿನ ಗ್ರಾಮಗಳೂ ಸೇರಿದಂತೆ ಕಾಡುಪ್ರಾಣಿಗಳಿಂದ ಆಗುತ್ತಿರುವ ಜೀವಹಾನಿಯನ್ನು ತಪ್ಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಶಾಖೆ ಇಂದು ಮನವಿ ಸಲ್ಲಿಸಿದೆ.
ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಅವರು ತಾಲ್ಲೂಕು ಹುಣಸೇಹಳ್ಳಿ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕ ಮಹಿಳೆಯ ಮೇಲೆ ಫೆ.೨೨ ರಂದು ದಾಳಿ ಮಾಡಿದ ಪರಿಣಾಮ ಮೃತಪಟ್ಟಿದ್ದಾರೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಮೃತ ಮಹಿಳೆಯ ಶವವನ್ನು ಟಾರ್ಪಲ್‌ನಲ್ಲಿ ಸುತ್ತಿ ಪಿಕಪ್ ವಾಹನದಲ್ಲಿ ಸಾಗಿಸಲು ಮುಂದಾಗಿರುವ ಅಮಾನವೀಯ ಕೃತ್ಯವನ್ನು ಖಂಡಿಸಿದ ಅವರು, ನಾಲ್ಕು ದಿನಗಳ ಅಂತರದಲ್ಲಿ ಕಾಡಾನೆ ದಾಳಿಗೆ ಎರಡು ಜೀವಗಳು ಬಲಿಯಾಗಿದ್ದು, ಈವರೆಗೆ ಒಟ್ಟು ೧೫ ಜನ ಗಾಯಗೊಂಡಿದ್ದು, ೧೦ ಜನ ಮೃತಪಟ್ಟಿದ್ದಾರೆಂದು ವಿವರಿಸಿದರು.
ಮಲೆನಾಡಿನ ಭಾಗದಲ್ಲಿ ಗ್ರಾಮಸ್ಥರು ಪ್ರಾಣವನ್ನು ಪಣಕ್ಕಿಟ್ಟು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಮಲೆನಾಡು ಹಾಗೂ ಬಯಲುಸೀಮೆಯ ಜನರಿಗೆ ಕಾಡುಪ್ರಾಣಿಗಳಿಂದ ಪ್ರಾಣಹಾನಿ ತಪ್ಪಿಸಲು ಮುಂದಾಗಬೇಕು, ಕೇವಲ ಪರಿಹಾರ ಘೋಷಿಸಿ ಕೈತೊಳೆದುಕೊಳುವಂತಾಗಬಾರದು ಎಂದು ತಿಳಿಸಿದ್ದಾರೆ.
ಕಾಡುಪ್ರಾಣಿಗಳ ಉಪಟಳ ಇದೇ ರೀತಿ ಮುಂದುವರೆದರೆ ಕೃಷಿ, ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ತುಂಬಾ ತೊಂದರೆಯಾಗುತ್ತಿದ್ದು, ಟಿಂಟಕಲ್ ಬೇಲಿ, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದರೂ ಈವರೆಗೆ ಕಾರ್ಯರೂಪಕ್ಕೆ ತಂದಿಲ್ಲ ಎಂದು ದೂರಿದ್ದಾರೆ.
ಕಾಡುಪ್ರಾಣಿಗಳು ಹಾಗೂ ಕಾಡಾನೆಗಳು ನಾಡಿಗೆ ಬರದಂತೆ ಅಗತ್ಯ ಇರುವ ಮೇವನ್ನು ಅರಣ್ಯ ಪ್ರದೇಶದಲ್ಲಿ ಪ್ರಕೃತಿದತ್ತವಾಗಿ ಅಭಿವೃದ್ಧಿಪಡಿಸುವ ವ್ಯವಸ್ಥೆಯನ್ನು ತುರ್ತಾಗಿ ಕೈಗೊಳ್ಳಬೇಕೆಂದು ಒತ್ತಾಯಿಸಿರುವ ಅವರು, ದಂಬದಹಳ್ಳಿ, ಮತ್ತಾವರ ಗ್ರಾಮಗಳ ಸುತ್ತಮುತ್ತ ಆನೆಗಳು ಓಡಾಡುತ್ತಿದ್ದು, ಕೂಡಲೇ ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಗುರುಶಾಂತಪ್ಪ, ಕುಮಾರಸ್ವಾಮಿ, ಭದ್ರೇಗೌಡ, ಸಿದ್ದೇಗೌಡ, ದೇವರಾಜೇಗೌಡ, ಮತ್ತಿತರರು ಉಪಸ್ಥಿತರಿದ್ದರು.
Karnataka State Farmers’ Association appeals to avoid loss of life
Leave a comment