ಚಿಕ್ಕಮಗಳೂರು: ಜಿಲ್ಲೆಯ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಆಗಸ್ಟ್ ೩೧ರಂದು ನಗರದಿಂದ ಧರ್ಮಸ್ಥಳ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಸ್.ಎಲ್.ಭೋಜೇಗೌಡ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಿಂದ ೧,೫೦೦ ಮಂದಿ ಧರ್ಮಸ್ಥಳ ಚಲೋದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ರಾಜ್ಯದಲ್ಲಿ ೧೫ ಸಾವಿರ ಜನರು ಭಾಗವಹಿಸುತ್ತಿದ್ದಾರೆ. ಶಿವಮೊಗ್ಗ, ದಾವಣಗೆರೆ ಮೂಲಕ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದು, ಅಂದು ಬೆಳಗ್ಗೆ ೮ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಚಾರ್ಮಾಡಿ ಘಾಟ್ ಮೂಲಕ ನೇತ್ರವತಿಯಲ್ಲಿ ಸೇರುತ್ತಿದ್ದಾರೆ. ಬೆಂಗಳೂರು, ಮೈಸೂರು ಮತ್ತು ಮಂಡ್ಯದವರು ಶಿರಾಡಿಘಾಟ್ ಮೂಲಕ ಆಗಮಿಸುತ್ತಿದ್ದಾರೆ. ಉತ್ತರ ಕನ್ನಡದವರು ಮಂಗಳೂರು ಮೂಲಕ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ನೇತ್ರಾವತಿಯಿಂದ ಎಲ್ಲರೂ ಸೇರಿ ಹೊರಟು ಧರ್ಮಸ್ಥಳದ ಮಂಜುನಾಥಸ್ವಾಮಿ ದರ್ಶನ ಪಡೆದು, ಎಸ್‌ಐಟಿ ತನಿಖೆ ಕುರಿತು ಕಾವಂದರೊಂದಿಗೆ ಚರ್ಚೆ ನಡೆಸಲಾಗುವುದು. ಧರ್ಮಸ್ಥಳದ ವಿಷಯದಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಧರ್ಮಸ್ಥಳ ಜಾಗದ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವ, ಈ ಸ್ಥಳದ ಬಗ್ಗೆ ವಿಶ್ವಾಸವಿಲ್ಲದವರು ಆಡುತ್ತಿರುವ ಮಾತಿಗೆ ಬೀಗಹಾಕಬೇಕೆನ್ನುವ ಉದ್ದೇಶದಿಂದ ಹಾಗೂ ಧರ್ಮಸ್ಥಳದೊಂದಿಗೆ ನಾವಿದ್ದೇವೆಂದು ಹೇಳುವ ಉದ್ದೇಶದಿಂದ ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್‌ಸ್ವಾತಂತ್ರ್ಯವಿದೆ. ಹಾಗೆಂದ ಮಾತ್ರಕ್ಕೆ ವಾಕ್ ಸ್ವಾತಂತ್ರ್ಯವನ್ನ ದುರುಪಯೋಗಪಡಿಸಿಕೊಳ್ಳಬಾರದು. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಬಳಿ ದಾಖಲೆಗಳಿದ್ದರೆ ಅದನ್ನು ಸಂಬಂಧಿಸಿದವರಿಗೆ ನೀಡಿದರೆ ಅದನ್ನು ಸ್ವಾಗತಿಸುತ್ತೇವೆ. ಅದನ್ನು ಬಿಟ್ಟು ಹಾದಿಬೀದಿಯಲ್ಲಿ ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು,.
ಧರ್ಮಸ್ಥಳದವನ್ನು ಅಪವಿತ್ರಗೊಳಿಸಬಾರದು. ಸಮಾಜಘಾತುಕ ಶಕ್ತಿಗಳು ಅವಹೇಳನಮಾಡುತ್ತಿದ್ದಾರೆ. ಆ ಜಾಗದಲ್ಲಿ ನಿಂತು ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ಹೀಗಾಗಿ ಕಾವಂದರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ದೌರ್ಜನ್ಯಕ್ಕೆ ಒಳಗಾದವರ ಪರವಾಗಿಯೂ ನಾವಿದ್ದೇವೆಂದು ತಿಳಿಸಿದ ಅವರು, ರಾಜಕೀಯ ಮಾಡುವ ಸಲುವಾಗಿ ಧರ್ಮಸ್ಥಳಕ್ಕೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷೆ ಶೀಲಾದಿನೇಶ್, ಜೆಡಿಎಸ್ ನಗರ ಅಧ್ಯಕ್ಷ ಕುಮಾರಗೌಡ, ಮಹಾಪ್ರಧಾನಕಾರ್ಯದರ್ಶಿ ಸಿ.ಕೆ.ಮೂರ್ತಿ, ನಗರಸಭೆ ಸದಸ್ಯ ಗೋಪಿ, ನಗರಸಭೆ ಮಾಜಿ ಸದಸ್ಯ ದಿನೇಶ್ ಇದ್ದರು.
JDS to contest Dharmasthala by August 31
Leave a comment