ಕಡೂರು: ಬೀರೂರು ಹಾಗೂ ಕಡೂರು ಠಾಣೆಯ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೂವರು ಅಂತರ್ ಜಿಲ್ಲಾ ಸರಗಳ್ಳರನ್ನು ಬಂಧಿಸಿ, ಅವರಿಂದ ₹6.40 ಲಕ್ಷ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ಜೂನ್ ತಿಂಗಳಿನಲ್ಲಿ ಬೀರೂರು ವ್ಯಾಪ್ತಿಯ ಕುಡ್ಲೂರು ಗೇಟ್ ಬಳಿ ಹಾಗೂ ಕಡೂರು ವ್ಯಾಪ್ತಿಯ ತಂಗಲಿ, ಚಟ್ನಳ್ಳಿ ಗ್ರಾಮಗಳಲ್ಲಿ ಒಂಟಿ ಮಹಿಳೆಯರಿಗೆ ಕಣ್ಣಿಗೆ ಖಾರದಪುಡಿ ಎರಚಿ, ಸರಗಳ್ಳತನ ನಡೆದಿರುವ ಕುರಿತಂತೆ ಬೀರೂರು, ಕಡೂರು ಹಾಗೂ ಸಿಂಗಟಗೆರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.
ಆರೋಪಿಗಳನ್ನು ಬಂಧಿಸಲು ಬೀರೂರು ಸರ್ಕಲ್ ಇನ್‌ಸ್ಪೆಕ್ಟರ್ ಶ್ರೀಕಾಂತ್ ಎಸ್.ಎನ್., ಕಡೂರು ಸರ್ಕಲ್ ಇನ್‌ಸ್ಪೆಕ್ಟರ್ ರಫೀಕ್ ಎಂ. ಅವರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎರಡು ತಂಡಗಳನ್ನು ರಚಿಸಿದ್ದರು.
ಹಲವು ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಬೆಳಗಾವಿ ಜಿಲ್ಲೆಯ ಶಹಬಂದರ್ ಗ್ರಾಮದ ಕನ್ನೇಶ್ವರ ಶಿವಪುತ್ರ ಮಠದವರ್, ಬಸವರಾಜ ಸುರೇಶ ಅಗಸಾಗಿ ಮತ್ತು ರಾಜು ಯಲಗುಂಡ ಮಠದವರ್ ಎಂಬುವರನ್ನು ಬಂಧಿಸಿ ಅವರಿಂದ ಬೀರೂರು ಪ್ರಕರಣದಲ್ಲಿ 20 ಗ್ರಾಂ, ಕಡೂರು ಪ್ರಕರಣದಲ್ಲಿ 21.5 ಗ್ರಾಂ ಮತ್ತು ಸಿಂಗಟಗೆರೆ ಪ್ರಕರಣದಲ್ಲಿ 20 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ರಾಣೆಬೆನ್ನೂರು ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ್ದ ಪಲ್ಸರ್ ಬೈಕ್ ಅನ್ನು ಕೃತ್ಯಕ್ಕೆ ಬಳಸಿ, ಬಳಿಕ ಅದನ್ನು ತುಮಕೂರು ಜಿಲ್ಲೆಯ ಶಿರಾ ಬಳಿಯ ಬಾವಿ ಒಂದರಲ್ಲಿ ಎಸೆದು ಹೋಗಿದ್ದರು. ಅದನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪಿಎಸ್‌ಐಗಳಾದ ಜಿ.ಆರ್.ಸಜಿತ್ ಕುಮಾರ್, ಧನಂಜಯ್, ಲೀಲಾವತಿ, ತಿಪ್ಪೇಶ್, ರಂಗನಾಥ್, ಶಾಹಿದ್ ಅಫ್ರಿದಿ, ಗಣಪತಿ ಆರ್. ಶೇರುಗಾರ್, ಎಎಸ್‌ಐ ವೇದಮೂರ್ತಿ, ಕೃಷ್ಣಮೂರ್ತಿ, ಸಿಬ್ಬಂದಿ ಡಿ.ವಿ.ಹೇಮಂತ್ ಕುಮಾರ್, ವಸಂತ್ ಕುಮಾರ್, ರಾಜು, ರೇಣುಕಮೂರ್ತಿ, ಸಿದ್ದಾನಾಯಕ, ಮಂಜಾನಾಯ್ಕ, ಶಿವಕುಮಾರ್, ರಾಜಪ್ಪ, ಮಧುಕುಮಾರ, ಹರೀಶ್, ಧನಪಾಲ ನಾಯ್ಕ, ಮಹಮ್ಮದ್ ರಿಯಾಜ್, ಸ್ವಾಮಿ, ಪರಮೇಶ್ವರ ನಾಯ್ಕ, ರೇಣುಕಾ ಪ್ರಸಾದ್, ಬೀರೇಶ, ಈಶ್ವರಪ್ಪ, ದೇವರಾಜ, ಶ್ರೀಧರ, ಅರುಣ್ ಕುಮಾರ್, ಹರೀಶ್, ಅಭಿಷೇಕ್, ನಜೀರ್, ಕಿಶೋರ್, ಚಾಲಕರಾದ ನಾಗೇಗೌಡ, ನವೀನ, ಅನೂಪ್ ಕುಮಾರ್ ಕೆ.ಎಲ್, ಜಿಲ್ಲಾ ತಾಂತ್ರಿಕ ವಿಭಾಗದ ರಬ್ಬಾನಿ ಹಾಗೂ ನಯಾಜ್ ಅಂಜುಮ್ ಕಾರ್ಯಾಚರಣೆಯಲ್ಲಿ ಇದ್ದರು. ಅಪರಾಧ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್.ಪಿ ಬಹುಮಾನ ಘೋಷಿಸಿದ್ದಾರೆ.
Inter-district drug gang arrested by Birur-Kadur police station
Leave a comment