ಚಿಕ್ಕಮಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ರೈತರ ಜಮೀನನ್ನು ಬಲವಂತದ ಭೂಸ್ವಾಧೀನಕ್ಕೆ ಮುಂದಾಗಿರುವ ಸರಕಾರದ ಕ್ರಮ ಖಂಡಿಸಿ ಜೂ.೨೫ ರಿಂದ ದೇವನಹಳ್ಳಿ ತಾಲೂಕು ಕಚೇರಿ ಮುಂದೆ ಅನಿರ್ದಿಷ್ಠಾವಧಿ ಮುಷ್ಕರ ಹೂಡಲು ನಿರ್ಧರಿಸಲಾಗಿದೆ ಎಂದು ಸಂಯುಕ್ತ ಹೋರಾಟ ಸಮಿತಿ ರಾಜ್ಯ ಸಂಚಾಲಕ ಗೌಸ್ ಮೊಹಿದ್ದೀನ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ರೈತರ ಭೂಮಿಯನ್ನು ಬಲವಂತವಾಗಿ ಭೂಸ್ವಾಧೀನಕ್ಕೆ ಪಡೆಯುವುದಿಲ್ಲ ಎಂದು ಧರಣಿ ನಿರತರಿಗೆ ಭರವಸೆ ನೀಡಿದ್ದರು. ಈಗ ಅವರೇ ಆಡಳಿತದಲ್ಲಿದ್ದು ಇಂದು ಸದ್ದಿಲ್ಲದೆ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ನೊಟೀಸನ್ನು ರೈತರಿಗೆ ನೀಡಿದ್ದಾರೆ. ನೊಟೀಸ್ ಹಿಂಪಡೆಯದಿದ್ದರೆ ಇಡೀ ರಾಜ್ಯಾದ್ಯಂತ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಚನ್ನರಾಯಪಟ್ಟಣ ಹೋಬಳಿಯ ೧೩ ಹಳ್ಳಿಯ ರೈತರ ಭೂಮಿಯನ್ನು ಕೈಗಾರಿಕಾ ವಸಾಹತು ನಿರ್ಮಾಣಕ್ಕೆ ನೀಡಲು ಸರಕಾರ ಮುಂದಾಗಿದೆ. ಪ್ರಪಂಚಕ್ಕೆ ಅನ್ನ ನೀಡುವ ರೈತರ ಭೂಮಿಯನ್ನು ಕಿತ್ತು ಬಹುರಾಷ್ಟ್ರೀಯ ಕಂಪನಿಗಳು, ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ನೀಡಲು ಮುದಾಗಿರುವ ಸರಕಾರದ ಕ್ರಮ ರೈತ ವಿರೋಧಿಯಾಗಿದೆ. ಈ ಬಲವಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ರದ್ದುಪಡಿಸಬೇಕು ಎಂದು ಜೂ.೨೫ ರಂದು ರೈತರು, ರೈತ ಕಾರ್ಮಿಕರು, ದಲಿತ, ಮಹಿಳಾ, ಬುದ್ದಿಜೀವಿಗಳು, ಸಾಹಿತಿಗಳು, ವಿದ್ಯಾರ್ಥಿ ಯುವಜನರು ದೇವನಹಳ್ಳಿ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಕಳೆದ ಮೂರುವರೆ ವರ್ಷದಿಂದ ಅಲ್ಲಿನ ೧೩ ಹಳ್ಳಿಯ ರೈತರು ನಾಡಕಚೇರಿ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಮಾಡುತ್ತಿದ್ದಾರೆ. ಶೇ.೮೦ ರಷ್ಟು ರೈತರು ಭೂಸ್ವಾಧೀನಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಇಷ್ಟಾಗಿಯೂ ಬಲವಂತದ ಭೂಸ್ವಾಧೀನಕ್ಕೆ ಸರಕಾರ ಮುಂದಾಗಿರುವುದು ಭೂಸ್ವಾಧೀನ ಕಾಯಿದೆ ೨೦೧೩ ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವಿವರಿಸಿದರು.
ದೇವನಹಳ್ಳಿ ವ್ಯಾಪ್ತಿಯಲ್ಲಿ ಅಲ್ಲಿನ ಪೊಲೀಸರು ನಿಷೇಧಾಜ್ಞೆ ಜಾರಿ ಮಾಡಿದ್ದು, ಪೊಲೀಸರ ಕೇಸಿಗೆ, ಜೈಲು, ಲಾಠಿ, ಗುಂಡಿಗೆ ಬಗ್ಗುವವರಲ್ಲ. ಹೋರಾಟದಿಂದ ಹಿಂದೆ ಸರಿಯುವವರಲ್ಲ. ಹೀಗಾಗಿ ಕೂಡಲೇ ಸರಕಾರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸುನಿಲ್‌ಕುಮಾರ್, ಮುಖಂಡ ಸಿ.ಟಿ. ತುಳಸೇಗೌಡ, ಡಿಎಸ್‌ಎಸ್‌ನ ಆಶಾ ಸಂತೋಷ್, ಪುಟ್ಟಸ್ವಾಮಿ, ಮಲ್ಲುಂಡಪ್ಪ, ನಜ್ಮಾಅಲಿ, ಟಿ.ಎಲ್. ಗಣೇಶ್ ದುರ್ಗೇಶ್, ಲೋಕೇಶ್, ವೆಂಕಟೇಶ್, ಸುರೇಶ್ ಮತ್ತಿತರರಿದ್ದರು.
Indefinite strike in front of Devanahalli Taluk Office on June 25th
Leave a comment