ಚಿಕ್ಕಮಗಳೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜಾರಿಯಾದ ಬಳಿಕ ಜನರ ಜೀವನ ಮಟ್ಟದಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಟೀಕೆಗಳ ನಡುವೆಯೂ ಈ ಯೋಜನೆಗಳು ಯಶಸ್ಸು ಕಂಡಿವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ಪಟ್ಟಣದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣದಲ್ಲಿ ಕೇಂದ್ರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಶ್ರಯದಲ್ಲಿ ಎರಡು ವರ್ಷಗಳ ಸಾಧನಾ ಸಂಭ್ರಮ ಪ್ರಗತಿಯತ್ತ ಕರ್ನಾಟಕ ಕುರಿತ ವಸ್ತು ಪ್ರದರ್ಶನವನ್ನು ಇಂದು ಬೆಳಿಗ್ಗೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಯಶಸ್ವಿ ಎರಡು ವರ್ಷಗಳು ಕಳೆದಿವೆ. ಈ ಯೋಜನೆಗಳು ಜನರಿಗೆ ಶಕ್ತಿಯನ್ನು ತುಂಬಿವೆ. ಅಭಿವೃದ್ಧಿ ಕಾರ್ಯದಲ್ಲೂ ನಮ್ಮ ಸರ್ಕಾರ ಹಿಂದೆ ಬಿದ್ದಿಲ್ಲ. ಆ ಯಶಸ್ಸಿನ ಬಗ್ಗೆ ವಾರ್ತಾ ಇಲಾಖೆಯ ಮೂಲಕ ಗ್ಯಾರಂಟಿಯ ಪ್ರಗತಿ ನೋಟವನ್ನು ವೀಕ್ಷಿಸಲು ಅನುವಾಗುವಂತೆ ಇದೀಗ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ಶಕ್ತಿ ಯೋಜನೆಯಿಂದ ಮಹಿಳೆಯರು ನಿಗಮದ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಲು ತುಂಬಾ ಅನುಕೂಲವಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರು ನೆಮ್ಮದಿಯಿಂದ ಸಂಸಾರ ನಡೆಸುತ್ತಿದ್ದಾರೆ. ಗೃಹಲಕ್ಷ್ಮೀ ಹಾಗೂ ಗೃಹಜ್ಯೋತಿ ಯೋಜನೆಗಳಿಂದ ಪ್ರತಿ ಕುಟುಂಬಗಳಿಗೆ ವಾರ್ಷಿಕ ತಲಾ ಸುಮಾರು ೩೫ ಸಾವಿರ ರೂ. ಉಳಿತಾಯವಾಗುತ್ತಿದೆ. ಫಲಾನುಭವಿಗಳು ಈ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ ಎಂದರು.
ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಅವರು ಮಾತನಾಡಿ, ರಾಜ್ಯ ಸರ್ಕಾರವು ನುಡಿದಂತೆ ನಡೆದಿದ್ದು, ಎರಡು ವರ್ಷಗಳಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದೆ. ಕೇವಲ ಗ್ಯಾರಂಟಿ ಯೋಜನೆಗೆ ಸೀಮಿತವಾಗದೆ ಜನರ ಬದುಕಿಗೆ ಪೂರಕವಾಗಿ ಸಮಾಜದಲ್ಲಿ ಸುಧಾರಣೆ ತರುವಂತಹ ಕಾರ್ಯಕ್ರಮಗಳನ್ನು ಕೈಗೊಂಡಿದೆ ಎಂದು ಬಣ್ಣಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಗ್ಯಾರಂಟಿ ಯೋಜನೆಗಳ ಕೈಪಿಡಿಯನ್ನು ಬಿಡುಗಡೆ ಮಾಡಿದರು. ವಸ್ತುಪ್ರದರ್ಶನದಲ್ಲಿ ಸರ್ಕಾರದ ಸಾಧನೆಗಳ ವಿವರ, ಫಲಾನುಭವಿಗಳ ಅನಿಸಿಕೆಗಳು, ಗ್ಯಾರಂಟಿ ಯೋಜನೆಗಳ ವಿವರವನ್ನು ಅನಾವರಣ ಮಾಡಲಾಗಿತ್ತು.
ಕಡೂರು ಪುರಸಭೆಯ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕಡೂರು ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಜಿಲ್ಲಾ ಕೆಡಿಪಿ ಸದಸ್ಯ ಗುಮ್ಮನಹಳ್ಳಿ ಅಶೋಕ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಹೇಮಾವತಿ, ಸದಸ್ಯರುಗಳಾದ ಪುಷ್ಪಾ ರಮೇಶ್, ಸುಜಾತ ಚಂದ್ರಶೇಖರ್, ತಾ.ಪಂ. ಮಾಜಿ ಅಧ್ಯಕ್ಷ ದಾಸಯ್ಯನಗುತ್ತಿ ಚಂದ್ರಪ್ಪ, ಪುರಸಭಾ ಸದಸ್ಯ ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ, ಪ್ರತಿರೂಪಿ ಸಂಸ್ಥೆಯ ಆನಂದ್ ಕಾರ್ಯಕ್ರಮದಲ್ಲಿದ್ದರು.
Improvement in people’s lives after implementation of guarantee scheme
Leave a comment