ಚಿಕ್ಕಮಗಳೂರು : ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳನ್ನು ಹಿಂದು ಸಂಘಟನಾ ಕಾರ್ಯಕರ್ತರು ಹಾಗೂ ಸ್ಥಳೀಯರು ತಡೆದು ರಕ್ಷಿಸಿರುವ ಘಟನೆ ಶನಿವಾರ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೇಗಾರ್ ನಲ್ಲಿ ನಡೆದಿದೆ.
ಏಜೆಂಟ್ ಒಬ್ಬನ ಮೂಲಕ ಸಾಗರದ ಕಸಾಯಿಖಾನೆಗೆ ಗೋವುಗಳನ್ನು ಬೇಗಾರಿನ ಹರಾವರಿ ಎಂಬ ಗ್ರಾಮದಿಂದ ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಇದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ತಡೆದು ಗೋವುಗಳನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು ವಾಹನವನ್ನು ಸೀಜ್ ಮಾಡಲಾಗಿದೆ ಹಾಗೂ ಗೋವುಗಳನ್ನು ಗೋಶಾಲೆಗೆ ಬಿಡಲಾಗಿದೆ.
ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಯಾವಾಗ ?
ಗೋ ಹತ್ಯಾ ನಿಷೇಧವಿದ್ದರೂ ಮಲೆನಾಡು ಭಾಗದಲ್ಲಿ ಮಾತ್ರ ಗೋಕಳ್ಳತನ ಮತ್ತು ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಬಿದ್ದಿಲ್ಲ. ಪ್ರತಿದಿನ ಜಿಲ್ಲೆಯಲ್ಲಿ ಅಕ್ರಮ ಗೋಕಳ್ಳತನ ಎಗ್ಗಿಲ್ಲದೆ ನಡೆಯುತ್ತಿದೆ. ಪೊಲೀಸರ ಕಣ್ಣು ತಪ್ಪಿಸಲು ಗೋಕಳ್ಳರು ನಾನಾ ತಂತ್ರ ಹೆಣೆಯುತ್ತಿದ್ದಾರೆ. ಆದರೆ, ಗ್ರಾಮಸ್ಥರು ಹಾಗೂ ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಹಲವು ಗೋವುಗಳನ್ನ ರಕ್ಷಿಸಲಾಗುತ್ತಿದೆ. ಐಷಾರಾಮಿ ವಾಹನಗಳಲ್ಲಿ ಅತಿ ಹಿಂಸಾತ್ಮಕವಾಗಿ ತುಂಬಿ ಗೋವುಗಳನ್ನು ಸಾಗಿಸಲಾಗುತ್ತಿದೆ. ದಿನ ಬೆಳಗಾದರೆ ಗೋಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಅಕ್ರಮ ಗೋ ಸಾಗಾಟ ಮತ್ತು ಕಳ್ಳತನಕ್ಕೆ ತಾರ್ಕಿಕ ಅಂತ್ಯವನ್ನು ಪೊಲೀಸ್ ಇಲಾಖೆಯೇ ಒದಗಿಸಬೇಕಾಗಿದೆ.
“ಮಲೆನಾಡು ಭಾಗದಲ್ಲಿ ಅಕ್ರಮ ಗೋಸಾಗಾಟವನ್ನು ಹಿಂದೂ ಸಂಘಟನೆ ಹಾಗೂ ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ್ದರೂ ಕೂಡ ಆರೋಪಿಗಳ ಮೇಲೆ ಸಣ್ಣ ಸೆಕ್ಷನ್ ಗಳನ್ನು ಹಾಕುತ್ತಿರುವುದರಿಂದ ಕೆಲವೇ ಗಂಟೆಯಲ್ಲಿ ಜಾಮೀನು ಪಡೆದು ಬರುತ್ತಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸದಿರುವುದು ಸಹ ಅಕ್ರಮ ಗೋ ಸಾಗಾಟಕ್ಕೆ ಪ್ರೇರಣೆ ನೀಡಿದೆ. ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಗೋಸಾಗಾಟದ ಕುರಿತು ತತ್‌ಕ್ಷಣ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಸರಿಯಾದ ಕ್ರಮ ಕೈಗೊಳ್ಳಲಿ. ಇಲ್ಲದಿದ್ದಲ್ಲಿ ಸಂಘಟನೆಯಿಂದ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ದಿವೀರ್ ಮಲ್ನಾಡ್ ಎಚ್ಚರಿಸಿದ್ದಾರೆ
Leave a comment