ಚಿಕ್ಕಮಗಳೂರು: ಕಸಬಾ ಹೋಬಳಿ ಕಾಫಿ ಬೆಳೆಗಾರರ ಸಂಘದ ಜವಾಬ್ದಾರಿಯನ್ನು ಯುವ ಪದಾಧಿಕಾರಿಗಳ ತಂಡವು ವಹಿಸಿಕೊಂಡಿದೆ. ಯಶಸ್ವಿಯಾಗಿ ಸಂಘವನ್ನು ಮುನ್ನಡೆಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ ಹೇಳಿದರು.
ಕಸಬಾ ಹೋಬಳಿ ನೂತನ ಅಧ್ಯಕ್ಷ ಐ.ಎಂ.ಮಿಥುನ್ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೂತನ ತಂಡಕ್ಕೆ ಶುಭ ಹಾರೈಸುತ್ತೇವೆ. ಸಂಘದ ಕಾರ್ಯಕ್ರಮಗಳಿಗೆ ಕೆಜಿಎಫ್ ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದರು.
ನೂತನ ಸಂಘವು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕೆಜಿಎಫ್ ಸೇರಿದಂತೆ ಎಲ್ಲಾ ಬೆಳೆಗಾರರ ಸಂಘಗಳು ಸಂಘಟಿತವಾಗಿ ಕೆಲಸ ಮಾಡಿದಾಗ ಗುರಿ ಸಾಧಿಸಬಹುದು ಎಂದು ತಿಳಿಸಿದರು.
ಬೆಳೆಗಾರರ ಪ್ರಮುಖ ಬೇಡಿಕೆಗಳಾದ ಡೀಮ್ಡ್ ಅರಣ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು, ಒತ್ತುವರಿ ಭೂಮಿ ಗುತ್ತಿಗೆಗೆ ನೀಡುವ ವಿಚಾರ, ಮಲೆನಾಡಿನಲ್ಲಿ ಆನೆಗಳ ಹಾವಳಿ ಉಂಟಾಗುತ್ತಿರುವ ಜೀವ ಹಾನಿ, ಬೆಳೆ ಹಾನಿ ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳುವುದು, ಕಾಡು ಪ್ರಾಣಿಗಳ ಹಾವಳಿಯಿಂದ ಮಲೆನಾಡಿನ ಜನ ಬದುಕಲು ಆಗುತ್ತಿಲ್ಲ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಇದರ ಬಗ್ಗೆ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು.
ಬೆಳೆಗಾರರ ಮುಖಂಡ ಕೆ.ಕೆ. ಮನುಕುಮಾರ್ ಮಾತನಾಡಿ, ಇಲ್ಲಿಂದ ಕಾಫಿ ಬೆಳೆಗಾರರ ಸಂಘದ ಎನ್.ಎಂ. ರವಿ ಅವರನ್ನು ಪ್ರತಿನಿಧಿಯನ್ನಾಗಿ ಕಳಿಸಿಕೊಡಲಾಗುತ್ತಿದೆ. ನೂತನ ಸಂಘಕ್ಕೆ ಎಲ್ಲಾ ಸಹಕಾರ ಇರುತ್ತದೆ ಎಂದರು.
ನೂತನ ಪ್ರಧಾನ ಕಾರ್ಯದರ್ಶಿ ಟಿ.ಕೆ. ಪ್ರದೀಪ್ ಮಾತನಾಡಿದರು. ಸಂಘದ ಉಪಾಧ್ಯಕ್ಷರಾಗಿ ಎ.ಆರ್.ನಿತಿನ್, ಖಜಾಂಚಿಯಾಗಿ ಸುಮಂತ್, ಪ್ರತಿನಿಧಿಯಾಗಿ ಎನ್.ಎಂ. ರವಿ, ಸಹಕಾರ್ಯದರ್ಶಿಯಾಗಿ ಆಕಾಶ್ ಆಯ್ಕೆಯಾದರು. ಹಿರಿಯ ಬೆಳೆಗಾರ ಎಂ.ಎಸ್.ಲಿಂಗಪ್ಪಗೌಡ, ಐ.ಎಂ.ಮಹೇಶ್ ಗೌಡ, ಉಮೇಶ್ಚಂದ್ರ ಇತರರು ಉಪಸ್ಥಿತರಿದ್ದರು.
I.M. Mithun is the new president of the Kasaba Hobli Coffee Growers Association.
Leave a comment