ಚಿಕ್ಕಮಗಳೂರು : ವೈದ್ಯನಾಗಿದ್ದು ಪತ್ನಿಗೆ ಮಾನಸಿಕ ಕಿರುಕುಳ ನೀಡಿ ಅನ್ನ-ನೀರು ನೀಡದೆ ವರ್ಷಗಟ್ಟಲೆ ಗೃಹ ಬಂಧನದಲ್ಲಿರಿಸಿದ ಮನ ಕಲಕುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ವೃತ್ತಿಯಲ್ಲಿ ವೈದ್ಯನಾಗಿದ್ದರು ಪತ್ನಿಯನ್ನು ಮಾನವೀಯತೆ ಮರೆತು ಹೊರ ಪ್ರಪಂಚಕ್ಕೆ ಹೋಗದಂತೆ ಗೃಹಬಂಧನದಲ್ಲಿ ಇರಿಸಿ ತನ್ನ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡ ವೈದ್ಯ ರವಿಕುಮಾರ್ ವಿರುದ್ಧ ಆರೋಪ ಕೇಳಿ ಬಂದಿದೆ.
ಚಿಕ್ಕಮಗಳೂರು ನಗರದ ದೋಣಿಕಣ ಸಮೀಪದ ಮನೆಯಲ್ಲಿ ವೈದ್ಯ ತನ್ನ ಪತ್ನಿ ವಿನುತಾರಾಣಿಯನ್ನು ಚಿತ್ರಹಿಂಸೆ ನೀಡಿ ಕಿರುಕುಳ ಕೊಡುತ್ತಿದ್ದಾರೆ. ಅದರಲ್ಲೂ ಹುಚ್ಚಿ ಎಂದು ಬಿಂಬಿಸಿ ಮಾನಸಿಕ ಜೊತೆಯಲ್ಲಿ ದೈಹಿಕ ಕಿರುಕುಳವನ್ನು ನೀಡಿ ಮನಸೋ ಇಚ್ಛೆ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೆ ಮಹಿಳೆಯ ಮಗನಿಗೂ ಕೂಡ ತಾಯಿಯ ಮೇಲೆ ಜಿಗುಪ್ಸೆ ಬರುವಂತೆ ಮಾಡಿ ತಾಯಿಯಿಂದ ಮಗನನ್ನು ದೂರ ಇರುವಂತೆ ಮಾಡಿರೋ ಆರೋಪವೂ ಕೇಳಿ ಬಂದಿದೆ. ಇಂದು ಬೆಳಗ್ಗೆ ವಿನುತಾ ರಾಣಿಯ ಸಹೋದರ ವಾಗೀಶ್ ಕುಮಾರ್, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಮನೆಯ ಬಾಗಿಲು ಒಡೆದು ಗೃಹಬಂಧನದಲ್ಲಿದ್ದ ಮಹಿಳೆಯನ್ನು ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಮೊಬೈಲ್ ಕೂಡ ಬಳಸದಂತೆ, ಸಾರ್ವಜನಿಕರ ಸಂಪರ್ಕ ಸಂಪರ್ಕವೂ ಸಿಗದಂತೆ ಮನೆಯಲ್ಲಿಯೇ ಕೂಡಿಹಾಕಿ, ಸಂಬಂಧಿಕರ ಸಂಪರ್ಕವೂ ಸಿಗದಂತೆ ಮಾಡಿ ನೆರೆಹೊರೆಯವರು ಜೊತೆ ಬೆರೆಯದಂತೆ ಮಾಡಿರುವ ಆರೋಪವು ಕೇಳಿಬಂದಿದೆ.
ಗೃಹ ಬಂಧನದಲಿದ್ದ ಮಹಿಳೆ ಹೊರ ಬರುತ್ತಿದ್ದಂತೆ ಅಕ್ಕ ಪಕ್ಕದ ಮನೆಯ ನಿವಾಸಿಗಳು ಹಲವು ದಿನಗಳ ಬಳಿಕ ಆಕೆಯ ಪರಿಸ್ಥಿತಿಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತೀವ್ರ ಬಳಲಿರುವ ದೇಹ ಹಾಗೂ ಊಟವಿಲ್ಲದೆ ಆರೋಗ್ಯ ಸಮಸ್ಯೆ ಉಂಟಾಗಿರುವ ಮಹಿಳೆಯ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ಪರಿಸ್ಥಿತಿಯನ್ನು ಗಮನಿಸಿ ಚಿಕ್ಕಮಗಳೂರು ಮೂಲದ ಉತ್ತರಖಾಂಡ್ ನಲ್ಲಿ ಐಎಎಸ್ ತರಬೇತಿ ಪಡೆಯುತ್ತಿರುವ ಮಿಥುನ್ ಇದನ್ನು ಗಮನಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಡಿಎಚ್ಒ ಹಾಗೂ ಮಹಿಳಾ ಠಾಣೆಗೆ ಸೂಚನೆ ನೀಡಿ ವಿನುತಾರಾಣಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುವಂತೆ ಸೂಚನೆ ನೀಡಿದ್ದಾರೆ.
Leave a comment