ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಗಾಳಿಯ ಅಬ್ಬರ ಮುಂದುವರೆದಿದ್ದು, ಮಳೆ ಹಿನ್ನೆಲೆ ಮೂಡಿಗೆರೆ, ಕಳಸ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಗೆ ಮೇ.26 ರಿಂದ ಮೇ.28ರ ವರೆಗೆ ರಜೆ ಘೋಷಣೆ ಮಾಡಲಾಗಿದೆ.
ಅಬ್ಬರದ ಗಾಳಿ ಮಳೆಗೆ ಮೂಡಿಗೆರೆ ತಾಲೂಕು ಬಾಳೂರು ಕಾಫಿ ಎಸ್ಟೇಟ್ ನಲ್ಲಿ ಕಾರ್ಮಿಕರ ಮನೆ ಮೇಲೆ ಮರ ಬಿದ್ದ ಪರಿಣಾಮ ಮನೆಯಲ್ಲಿದ್ದ ಸುನಂದ ಅವರಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಾಳು ಸುನಂದ ಅವರನ್ನು ಬಣಕಲ್ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಮರಬಿದ್ದು ಮನೆಯ ಮೇಲ್ಟಾವಣಿಗೆ ಸಂಪೂರ್ಣ ಹಾನಿಯಾಗಿದೆ. ಮನೆಯಲ್ಲಿದ್ದ ವಸ್ತುಗಳಿಗೂ ಹಾನಿಯಾಗಿದ್ದು ತೋಟದ ಮಾಲೀಕ ಹಾಗೂ ವ್ಯವಸ್ಥಾಪಕ ಗಾಯಗೊಂಡ ಸುನಂದ ಅವರನ್ನು ಆಸ್ಪತ್ರೆ ದಾಖಲಿಸುವ ಸೌಜನ್ಯವನ್ನು ತೋರಿಲ್ಲವೆಂದು ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಳೆ, ಗಾಳಿ ಅಬ್ಬರಕ್ಕೆ ಮಲೆನಾಡು ಭಾಗದಲ್ಲಿ ಸಾಲು ಸಾಲು ಅನಾಹುತಗಳು ಸಂಭವಿಸುತ್ತಿದ್ದು, ವಿದ್ಯುತ್ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡಿದೆ. ಟ್ರಾನ್ಸ್ ಫಾರ್ಮರ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಸಲ್ಲಿ ಸುತ್ತಮುತ್ತ ಮನೆಗಳಲ್ಲಿ ಅವಘಡ ಸಂಭವಿಸಿದೆ.
ಜಿಲ್ಲಾದ್ಯಂತ ಎಡಬಿಡದೆ ನಿರಂತರ ಮಳೆಗೆ ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ಹಳ್ಳಕೊಳ್ಳ, ಕೆರೆಕಟ್ಟೆಗಳು ತುಂಬಿವೆ. ಜಲಪಾತಗಳು ಸೃಷ್ಟಿಯಾಗಿವೆ. ಜಿಲ್ಲಾಡಳಿತದಿಂದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರವಾಸಿಗರು ಮತ್ತು ಜನರು ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಮುನ್ಸೂಚನೆ ನೀಡಲಾಗಿದೆ. ಗುಡ್ಡ ಕುಸಿತ ಸಂಭವಿತ ಪ್ರದೇಶಗಳ ಮೇಲೆ ನಿಗಾ ವಹಿಸಲಾಗಿದೆ.
Holiday declared for Anganwadi centers in the district till May 28
Leave a comment