ಚಿಕ್ಕಮಗಳೂರು: ಶೃಂಗೇರಿ ತಾಲ್ಲೂಕಿನಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಶನಿವಾರ ತುಂಗಾನದಿಯಲ್ಲಿ ಪ್ರವಾಹ ಉಂಟಾಗಿದೆ.
ಶೃಂಗೇರಿಯಲ್ಲಿ 70 ಮಿ.ಮೀ, ಕಿಗ್ಗಾದಲ್ಲಿ 152.4 ಮಿ.ಮೀ, ಕೆರೆಕಟ್ಟೆಯಲ್ಲಿ 211 ಮಿ.ಮೀ ಮಳೆಯಾಗಿದ್ದು, ಒಟ್ಟು 2,825 ಮಿ.ಮೀ ಮಳೆ ಸುರಿದಿದೆ.
ಭಾರಿ ಮಳೆಯಿಂದಾಗಿ ಶೃಂಗೇರಿಯಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರ್‌ನಲ್ಲಿ ರಸ್ತೆ ಜಲಾವೃತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಶೃಂಗೇರಿಯ ಭಾರತೀತೀರ್ಥ ರಸ್ತೆ ಹಾಗೂ ಕುರುಬಕೇರಿ ರಸ್ತೆ 2 ಕಡೆ ನೀರಿನಿಂದ ತುಂಬಿದ್ದು, ಮಧ್ಯೆ ದ್ವೀಪದಂತಾಗಿದೆ.
ತಾಲ್ಲೂಕಿನ ನರಸಿಂಹ ಪರ್ವತದ ಎರಡು ಕೊಳಗಳು, ಬರ್ಕಣ, ಸಿರಿಮನೆ, ಸೂತನಬ್ಬಿ ಮುಂತಾದ ಜಲಪಾತಗಳು ತುಂಬಿ ಉಕ್ಕಿ ಹರಿಯುತ್ತಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿದೆ.
ತುಂಗಾನದಿ ಉಕ್ಕಿ ಹರಿದು ಶಾರದಾ ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮಿಜೀಯವರ ಸ್ನಾನ ಘಟ್ಟ, ಸಂದ್ಯಾವಂದನೆ ಮಂಟಪ ಮುಳುಗಿದೆ. ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಗಾಂಧಿ ಮೈದಾನ, ವಿದ್ಯಾರಣ್ಯಪುರ ರಸ್ತೆ, ಕಿಕ್ರೆ ಹಳ್ಳ ಸೇತುವೆ ಮೇಲೆ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತಡೆಯುಂಟಾಗಿದೆ.
ತಾಲ್ಲೂಕಿನ 49 ಗ್ರಾಮಗಳಲ್ಲಿ ಶಿರ್ಲು, ಹಾದಿ, ಕೆರೆ, ಸುಂಕದಮಕ್ಕಿ, ನಿಲಂದೂರು, ಕುಂಬ್ರಗೋಡು, ಕೂಗೋಡು ಪಟ್ಟಣದಿಂದ 25ರಿಂದ 30 ಕಿ.ಮೀ. ದೂರವಿದ್ದು, ಅನಾರೋಗ್ಯ, ಅಪಘಾತ ಸಂಭವಿಸಿದರೆ ಆಸ್ಪತ್ರೆಗೆ ಬರಲು ಜನರು ಹರಸಾಹಸ ಪಡಬೇಕಿದೆ.
ಮಳೆಯಿಂದಾಗಿ ಶನಿವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಕಡಿತಗೊಂಡಿದ್ದ ವಿದ್ಯುತ್ ಶನಿವಾರದವರೆಗೂ ಬಂದಿಲ್ಲ. ಇದರಿಂದ ಪಟ್ಟಣ ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಬಾರದೆ ಜನರು ಸಂಕಷ್ಟ ಎದುರಿಸುವಂತಾಯಿತು.
ಮಳೆಯಿಂದಾಗಿ ತೋಟಗಾರಿಕೆ ಬೆಳೆಗಳಿಗೆ ಬೋರ್ಡೋ, ಗೊಬ್ಬರ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಅಡಿಕೆ, ಕಾಳು ಮೆಣಸಿಗೆ ಕೊಳೆರೋಗ, ಕಾಫಿಗೆ ಸೊರಗು ರೋಗ ಬಂದಿದ್ದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಾಲ್ಲೂಕಿನ ಗುಬ್ಬುಗೋಡಿನಲ್ಲಿ 3 ಕಂಬ, ಕೈಮನೆಯಲ್ಲಿ 2 ಕಂಬ, ಕಾನುಗೋಡಿನಲ್ಲಿ 1 ಕಂಬ, ಹಿಂಡ್ರವಳ್ಳಿಯಲ್ಲಿ 2 ಕಂಬ, ತನಿಕೋಡಿನಲ್ಲಿ 3 ಕಂಬ, ಹಾಲಂದೂರಿನಲ್ಲಿ 2 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಪ್ರವಾಹದಿಂದ ಯಾರು ದಿಕ್ಕೆಡಬಾರದೆಂದು ತಹಶೀಲ್ದಾರ್ ಅನುಪ್ ಸಂಜೋಗ್, ಇ.ಒ ಸುಧೀಪ್, ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಅಭಿಷೇಕ್, ಅಗ್ನಿ ಶಾಮಕ ಸಿಬ್ಬಂದಿ ತೀವ್ರ ಎಚ್ಚರ ವಹಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆ ಮುಂದುವರಿದಿದ್ದು, ಶನಿವಾರವೂ ಧಾರಾಕಾರವಾಗಿ ಸುರಿಯಿತು. ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಚಿಕ್ಕಮಗಳೂರು ನಗರ ಸೇರಿ ಮಲೆನಾಡಿನ ಎಲ್ಲೆಡೆ ಮಳೆ ಆರ್ಭಟಿಸಿತು.
ಮಲೆನಾಡಿನ ತಾಲ್ಲೂಕುಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಲಾಗಿತ್ತು. ಮುಳ್ಳಯ್ಯನಗಿರಿ ಸುತ್ತಮುತ್ತ ಎಡಬಿಡದೆ ಸುರಿದ ಮಳೆ ಮತ್ತು ಬಿರುಗಾಳಿಯ ನಡುವೆ ಪ್ರವಾಸಿಗರು ಪರದಾಡಿದರು.
Heavy rains cause flooding in Tunga River in Sringeri
Leave a comment