ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಮೈದುಂಬಿ ಹರಿಯುತ್ತಿವೆ. ಕುದುರೆಮುಖ, ಮುಳ್ಳಯ್ಯನ ಗಿರಿ, ಕಳಸ, ಹೊರನಾಡು, ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ, ಕೊಟ್ಟಿಗೆಹಾರ, ಬಾಳೆಹೊನ್ನೂರು, ಆಲ್ದೂರು ಸುತ್ತಮುತ್ತ ಮಳೆಯಾಗುತ್ತಿದೆ. ಶನಿವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮುಳ್ಳಯ್ಯನಗಿರಿ ಭಾಗದಲ್ಲಿ ಜೋರು ಗಾಳಿ ಮತ್ತು ಮಳೆ ಸುರಿಯುತ್ತಿದೆ. ಇದರ ನಡುವೆಯೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ಗುರುವಾರ ರಾತ್ರಿಯಿಂದ ನಿರಂತರ ಮಳೆ ಸುರಿದಿದ್ದು, ಶುಕ್ರವಾರವೂ ಮಳೆ ಮುಂದುವರಿದಿದೆ.
ಭಾರಿ ಗಾಳಿ– ಮಳೆಗೆ ತಾಲ್ಲೂಕಿನ ಕಾನೂರು ಗ್ರಾಮದ ಎಂ.ಸಿ. ಸತೀಶ ಎಂಬುವರ ಮನೆ ಮೇಲೆ ಮರ ಬಿದ್ದು, ಚಾವಣಿ ಹಾಗೂ ಗೋಡೆಗೆ ಹಾನಿ ಉಂಟಾಗಿದೆ. ಗುರುವಾರದಿಂದ ಶುಕ್ರವಾರ ಬೆಳಿಗ್ಗೆವರೆಗೆ ನರಸಿಂಹರಾಜಪುರದಲ್ಲಿ 3.72 ಸೆಂ.ಮೀ, ಬಾಳೆಹೊನ್ನೂರಿನಲ್ಲಿ 3.74 ಸೆಂ.ಮೀ ಹಾಗೂ ಮೇಗರಮಕ್ಕಿಯಲ್ಲಿ 3.40 ಸೆಂ.ಮೀ ಮಳೆಯಾಗಿತ್ತು.
ತುಂಗಾ ನದಿ ನೀರಿನ ಮಟ್ಟ ಏರಿಕೆ: ಶೃಂಗೇರಿ ತಾಲ್ಲೂಕಿನಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ತಾಲ್ಲೂಕಿನಲ್ಲಿ ಕಿಗ್ಗಾ 10.8 ಸೆಂ.ಮೀ., ಕೆರೆಕಟ್ಟೆ 10.14 ಸೆಂ.ಮೀ, ಶೃಂಗೇರಿ 7.02 ಸೆಂ.ಮೀ ಮಳೆಯಾಗಿದೆ.
ಮಳೆಯಿಂದ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳುವೆಬೈಲಿನ ಮತಗಟ್ಟೆಯಾದ ಮುಚ್ಚಿದ ಶಾಲೆಯ ಗೋಡೆ ಕುಸಿದು ಬಿದ್ದಿದೆ. ಭತ್ತದ ಗದ್ದೆಗಳಲ್ಲಿ ನೀರು ನಿಂತಿರುವುದರಿಂದ ಸಸಿಮುಡಿ ಮಾಡಲು ತೊಂದರೆಯಾಗಿದೆ. ಮೂಡಿಗೆರೆ ತಾಲ್ಲೂಕಿನಾದ್ಯಂತ ಶುಕ್ರವಾರ ಧಾರಾಕಾರ ಮಳೆಯಾಗಿದೆ.
ನಸುಕಿನಿಂದಲೂ ಆರ್ಭಟಿಸಿದ್ದ ಮಳೆ, ಇಡೀ ದಿನ ಬಿಡುವಿಲ್ಲದೆ ಸುರಿಯಿತು. ಕೆಲವೆಡೆ ಹಾನಿ ಉಂಟಾಗಿದೆ. ಮೂಲರಹಳ್ಳಿ, ಗುತ್ತಿ, ಹೊಸ್ಕೆರೆ, ಕೊಟ್ಟಿಗೆಹಾರ, ಮೇಕನಗದ್ದೆ, ದೇವರುಂದ ಸೇರಿದಂತೆ ಬಹುತೇಕ ಕಡೆ ಗಾಳಿ ಸಹಿತ ಮಳೆಯಾಗಿದ್ದು, ಮರಗಳು ಧರೆಗುರುಳಿ ಸಂಚಾರಕ್ಕೆ ಅಡ್ಡಿಯಾಗಿದೆ. ವಿದ್ಯುತ್ ಕಂಬಗಳು ಧರೆಗುರುಳಿದ್ದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಪೂರೈಕೆಗೆ ಅಡ್ಡಿಯಾಗಿದೆ.
ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಹೇಮಾವತಿ ಸೇರಿದಂತೆ ಎಲ್ಲ ನದಿಗಳು ತುಂಬಿ ಹರಿಯುತ್ತಿವೆ. ಜಿ.ಹೊಸಳ್ಳಿ, ಮುಗ್ರಹಳ್ಳಿ, ಸಬ್ಬೇನಹಳ್ಳಿ, ಫಲ್ಗುಣಿ ಭಾಗಗಳಲ್ಲಿ ನಾಟಿಗಾಗಿ ಸಿದ್ಧಪಡಿಸಿದ್ದ ಸಸಿ ಮಡಿಗಳು ನೀರಿನಲ್ಲಿ ಕೊಚ್ಚಿಹೋಗಿ ನಷ್ಟವಾಗಿದೆ. ಮಳೆಯಿಂದ ವಾರದ ಸಂತೆಗೂ ಗ್ರಾಹಕರು ಬರದೇ ವರ್ತಕರು ನಷ್ಟ ಅನುಭವಿಸುವಂತಾಯಿತು.
ಮಳೆಯೊಂದಿಗೆ ಚಳಿಯೂ ಹೆಚ್ಚಾಗಿದ್ದರಿಂದ ಜನರು ಮನೆಯಿಂದ ಹೊರಗೆ ಬರದೆ ಪಟ್ಟಣದಲ್ಲಿ ಇಡೀ ದಿನ ಜನರಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮಳೆ ಹೆಚ್ಚಾಗಿದ್ದರಿಂದ ಬಹುತೇಕ ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ನಡೆಯದೆ ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು.
ಶಾಲೆ, ಅಂಗನವಾಡಿಗಳಿಗೆ ರಜೆ: ಜಿಲ್ಲೆಯ ಮಲೆನಾಡು ಭಾಗದ ಐದು ತಾಲ್ಲೂಕುಗಳು ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಐದು ಹೋಬಳಿಗಳ ಅಂಗನವಾಡಿ, ಶಿಶುಪಾಲನಾ ಕೇಂದ್ರ ಮತ್ತು ಶಾಲೆಗಳಿಗೆ ಶನಿವಾರ(ಜು.26) ರಜೆ ಘೋಷಿಸಲಾಗಿದೆ.
ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ, ಶೃಂಗೇರಿ, ಕಳಸ ತಾಲ್ಲೂಕಿನ ವ್ಯಾಪ್ತಿ ಮತ್ತು ಚಿಕ್ಕಮಗಳೂರು ತಾಲ್ಲೂಕಿನ ಆವತಿ, ಜಾಗರ, ವಸ್ತಾರೆ, ಆಲ್ದೂರು ಮತ್ತು ಖಾಂಡ್ಯ ಹೋಬಳಿಗೆ ರಜೆ ಅನ್ವಯವಾಗಲಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶದಲ್ಲಿ ತಿಳಿಸಿದ್ದಾರೆ.
Leave a comment