ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಸುರಿಯುತ್ತಿರುವ ಮಹಾಮಳೆಗೆ ಮಲೆನಾಡಿನ ಕೆಲ ಭಾಗಗಳು ಕಂಗಾಲಾಗಿವೆ. ಭಾರೀ ಮಳೆಗೆ ಗ್ರಾಮೀಣ ಭಾಗದಲ್ಲಿ ಸೇತುವೆಗಳು ಜಲಾವೃತಗೊಂಡಿವೆ.
ಹಳ್ಳ ದಾಟಲು ಮುತ್ತೋಡಿ ವ್ಯಾಪ್ತಿಯ ಗ್ರಾಮದ ಜನರು ಪರದಾಡುತ್ತಿದ್ದಾರೆ. ವೃದ್ಧೆಯೊಬ್ಬರನ್ನ ಗ್ರಾಮಸ್ಥನೊಬ್ಬನು ಕೈಗಳಲ್ಲಿ ಹೊತ್ತು ಸಾಗಿದ ಘಟನೆಯೂ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಮಲಗಾರು ಗ್ರಾಮದಲ್ಲಿ ಈ ಪರಿಸ್ಥಿತಿ ಉಂಟಾಗಿದೆ. ಮಲಗಾರು ಗ್ರಾಮ ಮುತ್ತೋಡಿ ಅರಣ್ಯ ವ್ಯಾಪ್ತಿಯ ಕುಗ್ರಾಮವಾಗಿದ್ದು, ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ತೀವ್ರ ಪ್ರಮಾಣದ ನೀರು ಸೇತುವೆ ಮೇಲೆ ಹರಿಯುತ್ತಿದೆ. ಈ ಕಿರು ಸೇತುವೆ ತುಂಬಿ ಮಲಗಾರು ಗ್ರಾಮದ ಜನರು ಪರದಾಟ ಪಡುವಂತಾಗಿದೆ.
ಇದನ್ನು ಓದಿ: ಜಿಲ್ಲೆಯ ಹಲವೆಡೆ ಮಳೆ ಆರ್ಭಟ : ಸಿಡಿಲು ಬಡಿದು ಎತ್ತು ಸಾವು
ಮತ್ತೊಂದೆಡೆ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆಗೆ ಮುಳ್ಳಯ್ಯನ ಗಿರಿ ಪ್ರದೇಶದ ಜನ ಬೆಚ್ಚಿಬಿದ್ದಿದ್ದಾರೆ ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶದಲ್ಲಿ 2 ಅಡಿ ಮಳೆ ನೀರು ಹರಿಯುತ್ತಿದೆ. ಹಿಂಗಾರು ಮಳೆಗೆ ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ಅಲ್ಲೋಲ-ಕಲ್ಲೋಲವೇ ಉಂಟಾಗಿದೆ.
ಐ.ಡಿ ಪೀಠದ ರಸ್ತೆಯಲ್ಲಿ 2 ಅಡಿ ಎತ್ತರದಲ್ಲಿ ಮಳೆ ನೀರು ಹರಿಯುತ್ತಿದೆ. ಎಷ್ಟೇ ಮಳೆ ಬಂದರೂ ಪಶ್ಚಿಮ ಘಟ್ಟಕ್ಕೆ ಲೆಕ್ಕವೇ ಅಲ್ಲ ಆದರೂ ಸಾವಿರಾರು ಅಡಿ ಆಳ, ಮುಗಿಲೆತ್ತರದ ಬೆಟ್ಟಗುಡ್ಡಗಳ ಪಶ್ಚಿಮ ಘಟ್ಟಗಳ ತಪ್ಪಲು ಭಾರೀ ಮಳೆಗೆ ನಲುಗಿ ಹೋಗಿದೆ. ವಾಯುಭಾರ ಕುಸಿತದ ಮಳೆಯ ಅಬ್ಬರಕ್ಕೆ ಪಶ್ಚಿಮ ಘಟ್ಟವೇ ಬೆದರಿದೆ ವಾರಾಂತ್ಯ ಹಿನ್ನೆಲೆ ಆಗಮಿಸಿದ್ದ ಪ್ರವಾಸಿಗರು ಮಳೆರಾಯನ ಅಬ್ಬರಕ್ಕೆ ತೊಯ್ದು ತೊಪ್ಪೆ ಆಗಿದ್ದಾರೆ ಮಳೆ ಮಧ್ಯೆ ಸಿಲುಕಿ ಮುಳ್ಳಯ್ಯನ ಗಿರಿ ಸಹವಾಸವೇ ಬೇಡ ಎಂದು ಪ್ರವಾಸಿಗರು ಹೇಳುವಂತಾಗಿದೆ.
Leave a comment