ಚಿಕ್ಕಮಗಳೂರು: ಶಿವಶರಣ ಹಡಪದ ಅಪ್ಪಣ್ಣನವರಂತಹ ಮಹಾನುಭಾವರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬಾರದು. ಇವರು ಎಲ್ಲಾ ಸಮಾಜದ ಮಾತ್ರವಲ್ಲ, ಇಡೀ ರಾಷ್ಟ್ರದ ಆಸ್ತಿ. ಇವರ ವಿಚಾರಧಾರೆಗಳನ್ನು ನಾವು ನಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಅವರು ಹೇಳಿದರು.
ಜಿಲ್ಲಾಡಳಿತ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಶಿವಶರಣ ಹಡಪದ ಅಪ್ಪಣ್ಣನವರು ಬಸವಣ್ಣನವರ ಬಾಲ್ಯದ ಒಡನಾಡಿಗಳಾಗಿ ಬಸವಣ್ಣನವರ ಬಲಗೈ ಭಂಟನೆಂದೇ ಪ್ರಸಿದ್ಧರಾದವರು ಎಂದು ಬಣ್ಣಿಸಿದರು.
೧೨ನೇ ಶತಮಾನದಲ್ಲಿ ವಿಶ್ವದ ಪ್ರಪ್ರಥಮ ಪ್ರಜಾಪ್ರಭುತ್ವದ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲೂ ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿಗಳಾಗಿ ಯಾವುದೇ ರೀತಿಯ ಸಮಸ್ಯೆಯಾಗದಂತೆ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದರು. ಬಸವಣ್ಣನವರ ಆಸ್ಥಾನದಲ್ಲಿ ಅವರು ಪ್ರಾಮಾಣಿಕತೆ, ಸ್ವಾಮಿನಿಷ್ಠೆಯೊಂದಿಗೆ ಕರ್ತವ್ಯ ಪರಿಪಾಲನೆ ಮಾಡಿದ್ದರು. ಇವರು ಸುಮಾರು ೨೫೦ಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ. ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಯಾವುದೇ ವಿದ್ಯೆ ಇರಲಿಲ್ಲ; ಆದರೆ ಅಪಾರವಾದ ಜ್ಞಾನ ಶಕ್ತಿ, ತಿಳುವಳಿಕೆ ಮುಖಾಂತರ ಸಮಾಜವನ್ನು ಎಚ್ಚರಿಸಿದರು ಉತ್ತಮವಾದ ಸಮಾಜವನ್ನು ಕಟ್ಟಿದರು ಎಂದು ಹೇಳಿದರು.
ಸಾಹಿತಿ ಬಿ.ತಿಪ್ಪೇರುದ್ರಪ್ಪ ಉಪನ್ಯಾಸ ನೀಡಿ, ಅಪ್ಪಣ್ಣನವರ ಜನ್ಮಸ್ಥಳವು ಕೂಡ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿಹಾಳ ಗ್ರಾಮ ಎಂಬ ಪ್ರತೀತಿ ಇದೆ. ಇದು ಬಸವಣ್ಣನವರ ಜನ್ಮಸ್ಥಳವಾದ ಇಂಗಳೇಶ್ವರದಿಂದ ೬ ಕಿ.ಮೀ. ದೂರದಲ್ಲಿದೆ. ಹಡಪದ ಅಪ್ಪಣ್ಣ ಎಂದೇ ಇವರು ಖ್ಯಾತರು/ ಶರಣರ ಕಾಯಕವಾದ ಹಡಪದಕ್ಕೆ ಎರಡು ಅರ್ಥವಿದೆ, ಹಡಪ ಎಂದರೆ ಡಬ್ಬೆ, ಅದು ವೀಳ್ಯದ ಡಬ್ಬಿ ಹಾಗೂ ಕ್ಷೌರ ಸಾಮಗ್ರ್ರಿಯ ಡಬ್ಬಿ, ಎರಡಕ್ಕೂ ಹಡಪ ಎಂಬ ಹೆಸರಿದೆ.
ಅಪಾರ ಭಕ್ತಿ ಜ್ಞಾನವುಳ್ಳವರಾಗಿದ್ದ ಅಪ್ಪಣ್ಣನವರು ಕಾಯಕ ಜೀವಿಗಳಾಗಿ ಕ್ಷೌರ ವೃತ್ತಿಯನ್ನು ನಡೆಸಿಕೊಂಡು ಹೋಗುತ್ತಿದ್ದ ಶರಣರು. ಮಾಡುವ ಕಾಯಕ ಯಾವುದಾದರೂ ಅದು ಮೇಲೂ ಅಲ್ಲ, ಕೀಳೂ ಅಲ್ಲ, ತನು, ಮನ, ಧನವೆಂಬ ತ್ರಿಕರಣ ಶುದ್ಧವಾಗಿ ಮಾಡುವುದೇ ಕಾಯಕ ಎಂದು ಭಾವಿಸಿದ್ದರು.
ಅವರು ವಿವಾಹವಾದ ಶರಣೆ ಲಿಂಗಮ್ಮ ಕೂಡ ಅಪಾರ ಜ್ಞಾನವನ್ನು ಹೊಂದಿದವರಾಗಿದ್ದರು. ಆಗಿನ ಕಾಲದ ಜಾತಿ ವ್ಯವಸ್ಥೆಯಲ್ಲಿ ಭೌತಿಕವಾಗಿ ಈ ದಂಪತಿ ಹಿಂದುಳಿದಿದ್ದರೂ ಅತ್ಯಂತ ಸದೃಢ ಮನಸ್ಸಿನವರಾಗಿ ಮೇರು ಜ್ಞಾನವನ್ನು ಹೊಂದಿದ್ದರು. ಬಸವಣ್ಣನವರಿಗೆ ಅಪ್ಪಣ್ಣನವರು ಆಪ್ತಕಾರ್ಯದರ್ಶಿ ಮಾತ್ರವಲ್ಲ, ತಮ್ಮ ಜೀವದ ಒಡನಾಡಿಯಾಗಿದ್ದರು. ಪ್ರತಿ ಕ್ಷಣದಲ್ಲೂ ಬಸವಣ್ಣನವರಿಗೆ ಪ್ರತಿಯೊಂದು ಮಾಹಿತಿಯನ್ನೂ ಮೊದಲು ತಿಳಿಸುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್ ಮಾತನಾಡಿದರು. ಉಪತಹಸೀಲ್ದಾರ್ ರಾಮ್‌ರಾವ್ ದೇಸಾಯಿ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ವಿಶ್ವನಾಥ್ ಸಂಕಲ್ಪ, ಕರ್ನಾಟಕ ರಾಜ್ಯ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಎಸ್.ಎನ್ ಮಹಾಲಿಂಗಪ್ಪ, ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಎನ್.ಸತೀಶ್, ಉಪಾಧ್ಯಕ್ಷ ಟಿ.ಪಿ.ವಿಜಯ್ ಕುಮಾರ್, ಆರ್ಯ ನಯನ ಕ್ಷತ್ರಿಯ ಶ್ರೀ ರಾಮ ಮಂದಿರ ಸವಿತಾ ಸಮಾಜದ ಅಧ್ಯಕ್ಷ ಯೋಗೀಶ್ ಹಾಗೂ ಮುಖಂಡರು ಮತ್ತಿತರರು ಭಾಗವಹಿಸಿದ್ದರು.
Hadapada Appanna should not be limited to one community
Leave a comment