ಚಿಕ್ಕಮಗಳೂರು: ವೇದಾ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರೈತರು ಸಂಯಮ ಕಾಪಾಡಬೇಕು. ಜೊತೆಗೆ ಕೆರೆ ತುಂಬಿಸುವ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಸಿ. ಕಲ್ಮರುಡಪ್ಪ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಡೂರು ತಾಲ್ಲೂಕು ಸಖರಾಯಪಟ್ಟಣ ಹೋಬಳಿಯಲ್ಲಿ ಸದಾ ಕಾಲ ಬರಗಾಲಕ್ಕೆ ತುತ್ತಾಗಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಅನುಭವಿಸುತ್ತಿರುವ ನಾಗೇನಹಳ್ಳಿ, ಕಂಚುಗಾರನಹಳ್ಳಿ, ಹೊಸಳ್ಳಿ, ಹುಲಿಕೆರೆ ಗ್ರಾಮಗಳ ಜನರ ನೀರಿನ ಭವಣೆ ನೀಗಿಸಲು ೨೦೨೨ ರಲ್ಲಿ ನಾಗೇನಹಳ್ಳಿ ಕಟ್ಟೆ, ಬೆರಟಿಕೆರೆ ತುಂಬಿಸುವ ಯೋಜನೆಗೆ ಚಾಲನೆ ದೊರಕಿತ್ತು ಎಂದು ಹೇಳಿದರು.
ಸದರಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಅಯ್ಯನಕೆರೆ ತುಂಬಿ ಕೋಡಿಬಿದ್ದ ಹೆಚ್ಚುವರಿ ನೀರಿನಲ್ಲಿ ಅಲ್ಪಪ್ರಮಾಣದ ನೀರನ್ನು ಬಳಸಿಕೊಂಡು ಏತ ನೀರಾವರಿ ಮೂಲಕ ಕೆರೆ ತುಂಬಿಸುವ ಯೋಜನೆ ಇದಾಗಿದ್ದು, ೧೦೦ ಅಶ್ವಶಕ್ತಿ ಸಾಮರ್ಥ್ಯದ ಪಂಪ್ಸೆಟ್ ಬಳಸಿ ೯ ಇಂಚಿನ ಪೈಪ್ ಮೂಲಕ ೪೫ ದಿನಗಳು ಮಾತ್ರ ನೀರೆತ್ತುವ ಯೋಜನೆ ಇದಾಗಿದೆ ಎಂದರು.
ಕೆರೆನೀರು ಕೋಡಿಬಿದ್ದಾಗ ಹರಿಯುವ ಪ್ರಮಾಣದ ಪ್ರತಿ ಸೆಕೆಂಡಿಗೆ ೩೫೦೦ ಲೀ ಇದ್ದರೆ, ಕೇವಲ ೨.೫ ಲೀ ಮಾತ್ರ ನೀರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅಂದಾಜಿಸಲಾಗಿದ್ದು, ಇಷ್ಟು ನೀರು ಬಳಕೆ ಮಾಡುವುದರಿಂದ ನೀರಿನ ಹರಿವಿನಲ್ಲಿ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ ಎಂದು ತಿಳಿಸಿದರು.
ಈ ಕಾರಣದಿಂದ ವೇದಾ ನದಿಯ ದಡದ ಗ್ರಾಮಗಳ ಜನತೆಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಈಗಾಗಲೇ ಲಕ್ಯಾ ಹೋಬಳಿಯಲ್ಲಿ ೩ ಏತ ನೀರಾವರಿ ಯೋಜನೆಗಳು ಚಾಲ್ತಿಯಲ್ಲಿದ್ದು, ದಾಸರಹಳ್ಳಿ-ಲಕ್ಯಾದ ಮಾದರಸನ ಕೆರೆ ಮತ್ತು ಕರಗಡ ಯೋಜನೆಯಲ್ಲಿ ಬೆಳವಾಡಿ ಮತ್ತು ದೇವನೂರು ಕೆರೆಗಳಿಂದ ಕೋಡಿಬಿದ್ದ ನೀರು ವೇದಾ ನದಿಗೆ ಸೇರಲಿದೆ ಎಂದು ವಿವರಿಸಿದರು.
ರಣಘಟ್ಟ ಯೋಜನೆಯಲ್ಲಿ ಹಳೇಬೀಡು ಮತ್ತು ಬೆಳವಾಡಿ ಕೆರೆಗೆ ನೀರು ಹರಿಸುವ ಯೋಜನೆಯು ಒಂದು ವರ್ಷದಲ್ಲಿ ಮುಗಿಯಲಿದ್ದು, ಆ ನೀರು ಸಹ ವೇದಾ ನದಿಗೆ ಸೇರಲಿದೆ. ಎತ್ತಿನಹೊಳೆ ಯೋಜನೆಯ ಹೆಚ್ಚುವರಿ ನೀರು ವೇದ ನದಿಗೆ ಸೇರಿ ಈ ಎಲ್ಲಾ ಯೋಜನೆಗಳು ಕಾವೇರಿ ನದಿ ಪ್ರಾಂತ್ಯದ ಕೃಷ್ಣಾ ನದಿ ಪಾತ್ರಕ್ಕೆ ಹೆಚ್ಚುವರಿಯಾಗಿ ಹರಿಯಲಿದೆ ಎಂದರು.
ಕೂಗಳತೆ ದೂರದಲ್ಲಿರುವ ಅಯ್ಯನಕೆರೆ ಇದ್ದರೂ ಅಲ್ಲಿಂದ ಬಿದ್ದ ನೀರನ್ನು ವಾಣಿವಿಲಾಸ ಸಾಗರಕ್ಕೆ ಸೇರುತ್ತಿದ್ದು, ಈ ನೀರನ್ನು ಬಳಸಿಕೊಳ್ಳುವಲ್ಲಿ ಈ ಭಾಗದ ರೈತರು ವಿಫಲರಾಗಿದ್ದಾರೆ, ಕೇವಲ ಊಹಾ ಪೋಹಗಳಿಗೆ, ಸುಳ್ಳು ವದಂತಿಗಳಿಗೆ ರೈತರು ಕಿವಿಕೊಡಬಾರದೆಂದು ತಿಳಿಸಿದರು.
ಈ ಎಲ್ಲಾ ಯೋಜನೆಗಳಡಿ ಅಯ್ಯನಕೆರೆಗೂ ಮುಂದಿನ ದಿನಗಳಲ್ಲಿ ನೀರು ತುಂಬಿಸುವ ಯೋಜನೆ ರೂಪಿಸಲಾಗಿದ್ದು, ಸದಾ ಕಾಲ ತುಂಬಿ ಹರಿಯುವ ನೀರಿನಿಂದ ಬೊಗಸೆ ನೀರನ್ನು ಬಳಕೆ ಮಾಡಿಕೊಳ್ಳುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ. ಯಾವ ಸೇನೆಯೂ ಬೀದಿಗಿಳಿಯುವ ಅಗತ್ಯ ಇಲ್ಲ. ರೈತರ ಸಮಸ್ಯೆಯ ಅರಿವಿದ್ದರೆ ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಜನಪ್ರತಿನಿಧಿಗಳು ಹಾಗೂ ರೈತರ ಸಭೆ ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ತಾ.ಪಂ ಅಧ್ಯಕ್ಷ ರುದ್ರಮೂರ್ತಿ, ಮುಖಂಡರಾದ ಅಣ್ಣಾ ನಾಯಕ್, ವಸಂತ ಕುಮಾರ್, ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
Farmers should exercise restraint in sharing Veda River water
Leave a comment