ಚಿಕ್ಕಮಗಳೂರು: ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಪಕ್ಷ ಸಂಘಟನೆಗಳಿಂದ ನಗರದಲ್ಲಿ ಇಂದು ರೈತ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.
ನಗರದ ಆಜಾದ್ ಪಾರ್ಕಿನಲ್ಲಿ ಹಸಿರು ಬಾವುಟದೊಂದಿಗೆ ಸಮಾವೇಶಗೊಂಡ ನೂರಾರು ರೈತರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಈವರೆಗೆ ದೇಶದಲ್ಲಿ ಮಡಿದ ರೈತರ ಸ್ಮರಣಾರ್ಥ ಒಂದು ನಿಮಿಷ ಮೌನಾಚರಣೆ ಮಾಡಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ಮಾತನಾಡಿ, ರೈತರ ಸಮಸ್ಯೆಗಳ ಪರಿಹಾರಕ್ಕೆ ಪ್ರಬಲ ಹೋರಾಟವೊಂದೇ ದಾರಿ. ಸಂಘಟನೆ ಬಲಪಡಿಸಿ ರೈತರ ಪರವಾದ ಹೋರಾಟ ಇನ್ನುಮುಂದೆ ನಿರಂತರವಾಗಿ ನಡೆಯಲಿದೆ ಎಂದರು.
ರೈತ ಹೋರಾಟ ಸಮಿತಿ ಸಂಚಾಲಕ ಎಸ್.ವಿಜಯ್‌ಕುಮಾರ್ ಮಾತನಾಡಿ, ರೈತರಿಗಾಗಿ ಬಲಿದಾನವಾಗಿರುವ ೧೩೯ ಮಂದಿ ರೈತರನ್ನು ನೆನಪಿಸುವ ದಿನ ಇದಾಗಿದೆ. ೧೯೭೪-೮೦ ರ ದಶಕದಲ್ಲಿ ರೈತರ ತೆರಿಗೆ ವಿರೋಧಿಸಿ ನರಗುಂದ, ನವಲಗುಂದ ತಾಲೂಕಿನಲ್ಲಿ ನಡೆದ ರೈತ ಹೋರಾಟದಲ್ಲಿ ಅನೇಕ ರೈತರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದರು.
ರೈತ ವಿರೋಧಿ ನಡೆಯನ್ನು ಇಂದಿಗೂ ಸರಕಾರಗಳು ಕೈಬಿಟ್ಟಿಲ್ಲ. ಜಿಲ್ಲೆಯ ಮಲೆನಾಡು ಮತ್ತು ಬಯಲು ಭಾಗದಲ್ಲಿ ರೈತರ ಹತ್ತಾರು ಸಮಸ್ಯೆಗಳಿವೆ. ಹತ್ತಾರು ವರ್ಷ ಸಾಗುವಳಿ ಮಾಡಿ ಬದುಕು ಕಟ್ಟಿಕೊಂಡಿದ್ದ ರೈತರ ಭೂಮಿಯನ್ನು ಡೀಮ್ಡ್, ೪(೧) ಹೆಸರಲ್ಲಿ ಕಿತ್ತುಕೊಳ್ಳುವ ಕೆಲಸವನ್ನು ಸರಕಾರಗಳು ಮಾಡುತ್ತಿವೆ ಇದರ ವಿರುದ್ಧ ಹೋರಾಟ ತೀವ್ರಗೊಳ್ಳಬೇಕಿದೆ ಎಂದು ಎಚ್ಚರಿಸಿದರು.
ಸಿಪಿಐನ ಜಿಲ್ಲಾ ಕಾರ್ಯದರ್ಶಿ ರಾಧಾಸುಂದರೇಶ್ ಮಾತನಾಡಿ, ಈ ದೇಶದಲ್ಲಿ ಆಡಳಿತ ಮಾಡುವವರು ಮತ್ತಿತರರು ದೇಶಬಿಟ್ಟು ಹೋದರೆ ತೊಂದರೆಯೇನಿಲ್ಲ. ಆದರೆ, ರೈತ ೬ ತಿಂಗಳು ತನ್ನ ಕೃಷಿ ಕಾಯಕ ನಿಲ್ಲಿಸಿದರೆ ದೇಶ ಏನಾಗಬಹುದು ಎಂಬುದನ್ನು ಊಹಿಸಲು ಅಸಾಧ್ಯ ಎಂದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ರಾಧಕೃಷ್ಣ ಮಾತನಾಡಿ, ಈ ದೇಶದ ಬೆನ್ನೆಲುಬು ರೈತ ಎನ್ನುತ್ತಿದ್ದರು. ಈಗ ರೈತನನ್ನು ಕಮರ್ಷಿಯಲ್ ಆಗಿ ನೋಡುತ್ತಿವೆ ಸರಕಾರಗಳು.ರೈತ, ದಲಿತ, ಕಮ್ಯೂನಿಸ್ಟ್ ಸಂಘಟನೆಗಳ ಹೋರಾಟದ ಫಲವಾಗಿ ಇಂದು ಪ್ರಜಾಪ್ರಭುತ್ವ ಉಳಿದಿದೆ, ಸಂವಿಧಾನ ಜೀವಂತವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಕೆ.ಕೆ.ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಸುನಿಲ್‌ಕುಮಾರ್ ವೈ.ಸಿ, ಎಂ.ಸಿ. ಬಸವರಾಜು, ಮತ್ತಿತರೆ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿದರು. ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
Farmer Martyrs’ Day
Leave a comment