Home ಕಾಡಾನೆಗಳ ನಿಯಂತ್ರಣಕ್ಕೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ
HomechikamagalurLatest Newsnamma chikmagalur

ಕಾಡಾನೆಗಳ ನಿಯಂತ್ರಣಕ್ಕೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ

Share
Share

ಚಿಕ್ಕಮಗಳೂರು: ಮಲೆನಾಡಿನಲ್ಲಿ ಕಾಡಾನೆಗಳ ಉಪಟಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅರಣ್ಯ ಇಲಾಖೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ಮಾತ್ರವಲ್ಲದೆ, ನೆರೆಯ ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲೂ ಕಾಡಾನೆಗಳ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಮೂರೂ ಜಿಲ್ಲೆಗಳಿಗೆ ಅನ್ವಯವಾಗುವಂತೆ ಕಾಡಾನೆ ನಿಯಂತ್ರಣಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಅನುಪಾಲನಾ ವರದಿಯ ಆಧಾರದ ಮೇಲೆ ಸಭೆ ನಡೆಸುವಂತೆ ಕೆಲವು ಶಾಸಕರು ಸಲಹೆ ನೀಡಿದರು. ಆದರೆ, ವಿಧಾನಪರಿಷತ್‌ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌ ಅವರು ಕಾಡಾನೆಗಳ ಉಪಟಳ ನಿಯಂತ್ರಣ ಕುರಿತಂತೆ ಚರ್ಚೆಗೆ ಮನವಿ ಮಾಡಿದರು. ಅಲ್ಲದೆ, ಪ್ರಮುಖವಾಗಿ ಮೂಡಿಗೆರೆ ತಾಲೂಕಿನಲ್ಲಿ 55 ಕಾಡಾನೆಗಳು ನಾಲ್ಕೈದು ಗುಂಪುಗಳಲ್ಲಿ ಓಡಾಡುತ್ತಿವೆ. ಇವುಗಳಿಂದಾಗಿ ರೈತರು, ಕಾಫಿ ಬೆಳೆಗಾರರಿಗೆ ಅಪಾರ ಹಾನಿಯಾಗಿದೆ. ಜನ ವಸತಿ ಪ್ರದೇಶಕ್ಕೂ ಬಂದು ತೊಂದರೆ ನೀಡುತ್ತಿವೆ ಎಂದು ಪ್ರಾಣೇಶ್ ಹೇಳಿದರು.

ಕಾಡಾನೆಗಳ ಕುರಿತು ಮಾಹಿತಿ ನೀಡಿದ ಚಿಕ್ಕಮಗಳೂರು ಡಿಎಫ್‌ಓ ರಮೇಶ್‌ ಬಾಬು, ಚಿಕ್ಕಮಗಳೂರು ವಲಯದಲ್ಲಿ 35, ಕೊಪ್ಪ ವಲಯದಲ್ಲಿ 125, ಭದ್ರಾ ವನ್ಯಜೀವಿ ವಿಭಾಗದಲ್ಲಿ 400 ಕಾಡಾನೆಗಳು ಇವೆ. ಕಳೆದ 2-3 ವರ್ಷಗಳಿಂದ ಹಾಸನ ಜಿಲ್ಲೆಯ ಸಕಲೇಶಪುರದಿಂದ ಮೂಡಿಗೆರೆ ತಾಲೂಕಿಗೆ ಕಾಡಾನೆಗಳ ಹಿಂಡು ಬರುತ್ತಿವೆ.ಪ್ರಸ್ತುತ ನಾಲ್ಕೈದು ಗುಂಪುಗಳು ಓಡಾಡುತ್ತಿದ್ದು, ಅವುಗಳ ಚಲನವಲನದ ಮೇಲೆ ನಿಗಾ ಇಡಲು ಕೆಲವು ಆನೆಗಳಿಗೆ ಕಾಲರ್‌ ಐಡಿ ಹಾಕಲಾಗಿದೆ ಎಂದು ಹೇಳಿದರು.

ಮಧ್ಯೆಪ್ರವೇಶಿಸಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಕಾಡಾನೆಗಳಿಗೆ ಕಾಡಿನಲ್ಲಿಯೇ ಬೇಕಾಗುವಷ್ಟು ಆಹಾರ ಸಿಕ್ಕಿದರೆ ಅವುಗಳು ಜನ ವಸತಿ ಪ್ರದೇಶಕ್ಕೆ ಬರುವುದಿಲ್ಲ. ಆ ನಿಟ್ಟಿನಲ್ಲಿ ಅರಣ್ಯ ಇಲಾಖೆಯಲ್ಲಿ ಕಾರ್ಯ ಯೋಜನೆ ರೂಪಿಸಬೇಕು ಎಂದು ಸಲಹೆ ಮಾಡಿದರು.

ಈ ವೇಳೆ ಮಾತನಾಡಿದ ಸಚಿವ ಕೆ.ಜೆ.ಜಾರ್ಜ್, ಕಾಡಿನಿಂದ ಜನವಸತಿ ಪ್ರದೇಶಗಳು ಮತ್ತು ಕೃಷಿ ಜಮೀನುಗಳಿಗೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟುವ ಕೆಲಸ ಇಲಾಖೆಯಿಂದ ಆಗುತ್ತಿದೆ. ಸೆರೆ ಸಿಕ್ಕ ಆನೆಗಳನ್ನು ಬಿಡಾರಕ್ಕೆ ಬಿಡಲು ಭದ್ರಾ ವನ್ಯಜೀವಿ ವಿಭಾಗದಲ್ಲಿ ಆನೆಗಳ ಧಾಮವನ್ನು ನಿರ್ಮಾಣ ಮಾಡು ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.

ಈ ವೇಳೆ ಶಾಸಕಿ ನಯನಾ ಮೋಟಮ್ಮ ಮಧ್ಯೆಪ್ರವೇಶಿಸಿ, ಸ್ಥಳೀಯವಾಗಿ ಓಡಾಡುತ್ತಿರುವ ಆನೆಗಳಿಂದ ಜನರಿಗೆ ಯಾವುದೇ ತೊಂದರೆ ಆಗುತ್ತಿಲ್ಲ, ಹಾಸನ ಜಿಲ್ಲೆಯಿಂದ ಹಿಂಡು ಹಿಂಡಾಗಿ ಬರುತ್ತಿರುವ ಆನೆಗಳಿಂದ ತೊಂದರೆಯಾಗುತ್ತಿದೆ ಎಂದಾಗ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ದನಿಗೂಡಿಸಿ, ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

ಆನೆಗಳಿಗೆ ಕಾಡಿನಲ್ಲಿ ಆಹಾರ ಸಿಗುತ್ತಿಲ್ಲ. ಹಣ್ಣಿನ ಮರಗಳು ಹಾಗೂ ಬಿದಿರು ಬೆಳೆಸಬೇಕು ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಹೇಳಿದಾಗ, ಈ ವರ್ಷ 30 ಸಾವಿರ ಬಿದಿರು ಸಸಿಗಳನ್ನು ನಡೆಲು ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಡಿಎಫ್‌ಓ ರಮೇಶ್‌ ಬಾಬು ಹೇಳಿದರು.

ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಚರ್ಚೆ ಬಳಿಕ ಸಚಿವ ಕೆ.ಜೆ. ಜಾರ್ಜ್‌ ಅವರು, ಆನೆಗಳು ನಾಡಿಗೆ ನುಗ್ಗುವುದನ್ನು ನಿಯಂತ್ರಿಸುವ ಸಂಬಂಧ ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇದಾದ ಬಳಿಕ ಅನುಪಾಲನಾ ವರದಿ ಆಧಾರದ ಮೇಲೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಶಾಸಕರಾದ ಕೆ.ಎಸ್‌.ಆನಂದ್‌, ಶ್ರೀನಿವಾಸ್‌, ಎಚ್‌.ಡಿ.ತಮ್ಮಯ್ಯ, ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಜಿಪಂ ಮುಕ್ಯ ಕಾರ್ಯನಿರ್ವಹಣಾಧಿಕಾರಿ ಎಚ್‌.ಎಸ್‌. ಕೀರ್ತನಾ ಉಪಸ್ಥಿತರಿದ್ದರು.

Discuss with higher authorities and take appropriate action to control wild elephants

Share

Leave a comment

Leave a Reply

Your email address will not be published. Required fields are marked *

Don't Miss

ಮೂಡಿಗೆರೆ ತಾಲ್ಲೂಕಿನಾದ್ಯಂತ ಮಳೆಯಿಂದ ಜನಜೀವನ ಅಸ್ತವ್ಯಸ್ತ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ಇಡೀ ದಿನ‌ ಬಿಡುವಿಲ್ಲದೇ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ತಾಲ್ಲೂಕಿನ ಗಂಗನಮಕ್ಕಿ ಗ್ರಾಮದಲ್ಲಿ ಮಂಜುನಾಥ್ ಹಾಗೂ ಗಿರೀಶ್ ಅವರಿಗೆ ಸೇರಿದ ಹಳೆಯ ಕಟ್ಟಡವೊಂದು ಕುಸಿದಿದ್ದು, ಅಪಾರ ಪ್ರಮಾಣದ...

40 ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು

ಕಡೂರು: ತಾಲ್ಲೂಕಿನ ಸಿಂಗಟಗೆರೆ ಸಮೀಪದ 9ನೇ ಮೈಲಿಕಲ್ಲು ಸಮೀಪದಲ್ಲಿ ಪೈಪ್‌ಲೈನ್ ಕಾಮಗಾರಿ ಜಾಗದಲ್ಲಿದ್ದ ₹ 40ಸಾವಿರ ಮೌಲ್ಯದ 400 ಮೀಟರ್ ಪೈಪ್‌  ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಸಿಂಗಟಗೆರೆ ಪೊಲೀಸರು ಬಂಧಿಸಿ,...

Related Articles

ವೇದಾನದಿಯಿಂದ ಕೆರೆ ತುಂಬಿಸುವ ಯೋಜನೆ ಸ್ಥಗಿತಗೊಳಿಸಬೇಕು

ಚಿಕ್ಕಮಗಳೂರು:  ವೇದಾ ನದಿಯ ಅಗ್ರಹಾರ ಬಳಿ ಇರುವ ಚೆಕ್‌ಡ್ಯಾಂನಿಂದ ಹುಲಿಕೆರೆ, ಬೆರಟಿಕೆರೆ, ನಾಗೇನಹಳ್ಳಿಯ ಕೆರೆಗಳಿಗೆ ನೀರೊದಗಿಸುವುದನ್ನು...

ನಿಷೇಧಿತ ಅರಣ್ಯ ಪ್ರದೇಶದಲ್ಲಿ ಟ್ರಕ್ಕಿಂಗ್-103 ಪ್ರವಾಸಿಗರು ಪೊಲೀಸರು ವಶಕ್ಕೆ

ಚಿಕ್ಕಮಗಳೂರು: ಪಶ್ಚಿಮ ಘಟ್ಟದ ನಿಷೇಧಿತ ಅರಣ್ಯ ಪ್ರದೇಶ ಬಿದಿರುತಳದಲ್ಲಿ ಅನುಮತಿ ಇಲ್ಲದೆ ಟ್ರಕ್ಕಿಂಗ್ ನಡೆಸುತ್ತಿದ್ದ ೧೦೩...

ಕೇಂದ್ರ ಗುಪ್ತಚರ ಇಲಾಖೆ ಪೇದೆ ಆತ್ಮಹತ್ಯೆ

ಚಿಕ್ಕಮಗಳೂರು: ಅನಾರೋಗ್ಯದ ಸಮಸ್ಯೆ ಹಿನ್ನೆಲೆ ಗುಪ್ತಚರ ಇಲಾಖೆಯ ಪೇದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ...

ದೇಶ ಸುಭದ್ರಗೊಳಿಸಲು ಯುವಕರು ಯೋಧರಾಗಿ

ಚಿಕ್ಕಮಗಳೂರು:  ಭವ್ಯ ಭಾರತದ ಕನಸನ್ನು ಹೊತ್ತಿರುವ ಯುವಕರು ವಯಸ್ಸಿನಲ್ಲಿ ವ್ಯಸ ನಗಳ ಚಟಕ್ಕೆ ಬಲಿಯಾಗದೇ, ದೇಶವನ್ನು...