ಚಿಕ್ಕಮಗಳೂರು: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಲ್ಲಿ ಕಾನೂನು ಬಾಹಿರವಾಗಿ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದರ ಜೊತೆಗೆ ಕಾನೂನು ಹೋರಾಟ ರೂಪಿಸುವುದಾಗಿ ದಲಿತ ಸಂಘರ್ಷ ಸಮಿತಿ ಮುಖಂಡ ಮರ್ಲೆ ಅಣ್ಣಯ್ಯ ಎಚ್ಚರಿಸಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳಿಗೆ ಒಳಮೀಸಲು ನೀಡುವತನಕ ಯಾವುದೇ ನೇಮಕಾತಿ ಅಧಿಸೂಚನೆ ಹೊರಡಿಸಬಾರದು ಎಂದು ರಾಜ್ಯಸರಕಾರ ಆದೇಶಿಸಿದೆ. ಈ ಆದೇಶವನ್ನು ಉಲ್ಲಂಘಿಸಿ ನೇಮಕಾತಿ ಅಧಿಸೂಚನೆ ಹೊರಡಿಸುವ ಮೂಲಕ ಎಸ್ಸಿ ವಿದ್ಯಾವಂತ ಯುವಜನತೆಯನ್ನು ವಂಚಿಸುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಬ್ಯಾಂಕಿನ ಮುಂಬಡ್ತಿಗಳಲ್ಲಿ ರೋಸ್ಟರ್ ನಿಯಮ ಪಾಲನೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದ್ದರೂ, ಈ ಬಗ್ಗೆ ಹೈಕೋರ್ಟ್ ಆದೇಶ ನೀಡಿದ್ದರೂ ಸಹ ಸೂಕ್ತ ಕ್ರಮ ಜರುಗಿಸದೆ ಪರಿಶಿಷ್ಟ ನೌಕರರನ್ನು ದ್ವಿತೀಯ ದರ್ಜೆ ಪ್ರಜೆಗಳಂತೆ ಕಾಣಲಾಗುತ್ತಿದೆ. ಮೇ.೨೫ ರಂದು ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆ ನಡೆಯುತ್ತಿದೆ. ಅಂದು ಯಾವುದೇ ಇತರೆ ಪರೀಕ್ಷೆಗಳನ್ನು ನಡೆಸಬಾರದು ಎಂಬ ನಿಯಮವಿದ್ದರೂ ಅದೇ ದಿನ ಡಿಸಿಸಿ ಬ್ಯಾಂಕಿನ ನೇಮಕಾತಿ ಪರೀಕ್ಷೆ ದಿನ ನಿಗದಿ ಮಾಡಿದ್ದಾರೆ. ಬೇರೆ ದಿನ ನಡೆಸುವಂತೆ ಸರಕಾರದ ಕಾರ್ಯದರ್ಶಿಗಳು ಆದೇಶಿಸಿದ್ದರೂ ಅದನ್ನು ಉಲ್ಲಂಘಿಸಲಾಗಿದೆ ಎಂದು ದೂರಿದರು.
ಬ್ಯಾಂಕಿನ ಆಡಳಿತ ಮಂಡಳಿ ಅವಧಿಯು ಇನ್ನೂ ೬ ತಿಂಗಳು ಬಾಕಿ ಇದ್ದು ಈ ಸಂದರ್ಭದಲ್ಲಿ ತರಾತುರಿಯಲ್ಲಿ ನೇಮಕಾತಿಯನ್ನು ಪೂರ್ಣಗೊಳಿಸಲು ಯತ್ನಿಸುತ್ತಿರುವುದು ಇವರ ದುರುದ್ದೇಶದ ಕ್ರಮವಾಗಿದೆ. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸರಕಾರದ ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಲು ನಿರ್ದೇಶನ ನೀಡಬೇಕು. ಅಲ್ಲಿಯತನಕ ಪರೀಕ್ಷೆಯನ್ನು ಮುಂದೂಡುವಂತೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಡಿಸಿಸಿ ಬ್ಯಾಂಕಿನಲ್ಲಿ ಮೀಸಲಾತಿ ಪಾಲಿಸುವಂತೆ ಹೈಕೋರ್ಟ್ ೨೦೧೭ ರಲ್ಲಿ ನೀಡಿರುವ ಆದೇಶವನ್ನು ಪಾಲಿಸಿದ ನಂತರವೇ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಚಿಗನಹಳ್ಳಿಮಂಜಯ್ಯ ಉಪಸ್ಥಿತರಿದ್ದರು.
Demand to stop DCC Bank recruitment process
Leave a comment