ಚಿಕ್ಕಮಗಳೂರು: ಅಯ್ಯನಕೆರೆ ಕೋಡಿಬಿದ್ದು ಹರಿಯುವ ನೀರಿನಿಂದ ಕೆರೆಗಳನ್ನು ತುಂಬಿಸುವ ಕಾಮಗಾರಿ ಎಂದು ಸರ್ಕಾರ ಅನುಮೋದನೆ ನೀಡಿದ್ದು, ಈ ಯೋಜನೆಯ ಬಗ್ಗೆ ಎರಡೂ ಭಾಗದ ರೈತರ ಗಮನಕ್ಕೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡಿಲ್ಲ ಎಂದು ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಕೆ. ಲೋಕೇಶ್ ಆರೋಪಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಸಕರು, ಜನಪ್ರತಿನಿಧಿಗಳು ಹಾಗೂ ಎರಡೂ ಭಾಗದ ರೈತರನ್ನೊಳಗೊಂಡ ಸಭೆಯನ್ನು ಜಿಲ್ಲಾಧಿಕಾರಿಗಳು ಕರೆದು ಯಥಾಸ್ಥಿತಿ ಕಾಪಾಡಬೇಕು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣದಿಂದಲೇ ಚಾನಲ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಇಂಜಿನಿಯರ್‌ಗಳು ಅವೈಜ್ಞಾನಿಕವಾಗಿ ದಾಖಲೆಗಳನ್ನು ಸೃಷ್ಟಿಸಿ ಅಗ್ರಹಾರದ ಚೆಕ್‌ಡ್ಯಾಂ ನಿಂದ ನೀರೆತ್ತುವ ಕಾಮಗಾರಿ ಕಾರ್ಯರೂಪಗೊಳಿಸಿರುವುದನ್ನು ಖಂಡಿಸಿದರು.
ಸುಮಾರು ಕಡೂರು ಭಾಗದ ೫೧ ಹಳ್ಳಿಗಳ ರೈತರಿಗೆ ವೇದಾ ನದಿಯು ಜೀವನದಿಯಾಗಿದೆ. ಇಂದಿಗೂ ಕುಡಿಯಲು ಈ ನದಿ ನೀರನ್ನು ಬಳಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರು, ಅಧಿಕಾರಿಗಳು, ಶಾಸಕರು ಕ್ರಮ ವಹಿಸುವಂತೆ ಮನವಿ ಮಾಡಿದರು.
ಅಯ್ಯನಕೆರೆಯಿಂದ ಕೋಡಿಬಿದ್ದ ನೀರು ಜೀವನಾಡಿಯಾದ ವೇದಾ ನದಿಗೆ ಬರುವುದೇ ಇಲ್ಲ. ಕೋಡಿಬಿದ್ದ ನೀರು ೩೫೪೦ ಕ್ಯೂಸೆಕ್ಸ್ ಹೊರ ಹರಿಯುತ್ತದೆ ಎಂದು ಡಿಪಿಆರ್‌ನಲ್ಲಿ ನಮೂದಿಸಿರುವುದು ಇದು ಶುದ್ಧ ಸುಳ್ಳು, ಅವೈಜ್ಞಾನಿಕವಾಗಿದೆ ಎಂದು ದೂರಿದರು.
ಮಾನ್ಸೂನ್ ಪ್ರಾರಂಭವಾದ ೪೫ ದಿನಗಳಲ್ಲಿ ದಿನಕ್ಕೆ ೨೨ ಗಂಟೆ ೨೦೦ ಅಶ್ವಶಕ್ತಿಯ ಪಂಪ್‌ನಿಂದ ನೀರೆತ್ತುವ ಕೆಲಸ ಪ್ರಾರಂಭವಾಗುತ್ತದೆ ಎಂದು ಮಾಜಿ ಜಿ.ಪಂ ಸದಸ್ಯ ಹೆಚ್.ಸಿ ಕಲ್ಮರುಡಪ್ಪ ಅವರು ಮಾಹಿತಿ ಇಲ್ಲದೆ ತಪ್ಪು ಹೇಳಿಕೆ ನೀಡಿದ್ದಾರೆ. ಅಯ್ಯನ ಕೆರೆಯಿಂದ ಹೊರ ಹರಿಯುವ ನೀರಿಗೂ ವೇದಾ ನದಿಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಗಣೇಹಳ್ಳಿ ಗ್ರಾ.ಪಂ ಸದಸ್ಯ ಬಸವರಾಜ್ ಉಪಸ್ಥಿತರಿದ್ದರು.
Demand to stop channel work for the benefit of farmers
Leave a comment