ಚಿಕ್ಕಮಗಳೂರು: ಕಾಫಿನಾಡಿನ ವಿಜಯಪುರ ಬಡಾವಣೆಯ ಹಿಂದೂ ಮನೆಯೊಂದರ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಡಿಪಿಐ ಜಿಲ್ಲಾಧ್ಯಕ್ಷ ಗೌಸ್ ಮುನೀರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಈ ಘಟನೆಯ ಹಿಂದೆ ಕಣ್ಣಿಗೆ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ದೂರಿದ್ದಾರೆ.
ಪೊಲೀಸರು ಭಜರಂಗದಳದಂತಹ ಸಂಘಟನೆಗಳಿಗೆ ಹೆದರುತ್ತಿರುವುದು ಈ ಪ್ರಕರಣದಲ್ಲಿ ಎದ್ದು ಕಾಣುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ತನಿಖೆ ನಡೆಸುವ ಬದಲು ಪ್ರಕರಣವನ್ನು ಕೂಡಲೇ ಎಸ್ಐಟಿಗೆ ಒಪ್ಪಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ನೈಜತೆಯನ್ನು ಬಹಿರಂಗಪಡಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿರುವ ಅವರು, ಸಿ.ಟಿ. ರವಿ ಅವರು ಮುಸ್ಲಿಮರನ್ನು ಗುರಿಯಾಗಿಸಿ ಹೇಳಿಕೆ ನೀಡುವ ಮೂಲಕ ಪ್ರತಿಭಟನೆಗಳನ್ನು ಪ್ರಚೋದಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಮುಸ್ಲಿಂ ಸಮುದಾಯದ ಮತಗಳನ್ನು ಪಡೆದು ಆಯ್ಕೆಯಾದ ಶಾಸಕರು ಈಗ ಸಮುದಾಯದ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಶಾಸಕ ತಮ್ಮಯ್ಯ ಅವರು ಇಂತಹ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಪರವಾಗಿ ನಿಲ್ಲಬೇಕಿತ್ತು,
ಆದರೆ ಶಾಸಕರು ಕುಟುಂಬದೊಂದಿಗೆ ಪ್ರವಾಸದಲ್ಲಿದ್ದರೆ ಇತ್ತ ಮುಸ್ಲಿಂ ಕುಟುಂಬಗಳು ಜೈಲು ಪಾಲಾಗಿ ಕಣ್ಣೀರು ಹಾಕುತ್ತಿವೆ ಎಂದು ಕಿಡಿಕಾರಿದ್ದಾರೆ. ಗೃಹ ಸಚಿವ ಪರಮೇಶ್ವರ್ ಅವರು ಅಧಿಕಾರಿಗಳಿಂದ ತಪ್ಪು ಮಾಹಿತಿ ಪಡೆಯುತ್ತಿದ್ದು, ತಮಗೆ ಏನೂ ತಿಳಿದಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಹೀಗಾಗಿ ತಪ್ಪು ಮಾಹಿತಿ ನೀಡಿದ ಅಧಿಕಾರಿಯನ್ನು ಅಮಾನತುಗೊಳಿಸಿ ಸಚಿವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಮುಸ್ಲಿಮರ ಬಗ್ಗೆ ಮಾತನಾಡಿದರೆ ಡ್ಯಾಮೇಜ್ ಆಗುತ್ತದೆ ಎಂದು ಭಾವಿಸಿರುವ ಪಕ್ಷಗಳಿಗೆ ಮುಂದಿನ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗೌಸ್ ಮುನೀರ್ ಎಚ್ಚರಿಸಿದ್ದಾರೆ.
Demand for SIT investigation into stone pelting case
Leave a comment