ಚಿಕ್ಕಮಗಳೂರು: ಧರ್ಮಸ್ಥಳ ಪೊಲೀಸ್‌ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ತನಿಖೆಯನ್ನು ಎಸ್‌ಐಟಿ ನಿಷ್ಪಕ್ಷಪಾತವಾಗಿ ನಡೆಸಿ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. ನೊಂದವರಿಗೆ ನ್ಯಾಯ ಸಿಗುವಂತಾಗಬೇಕು ಎಂದು ಕರ್ನಾಟಕ ಜನಶಕ್ತಿ ಹಾಗೂ ಎದ್ದೇಳು ಕರ್ನಾಟಕ ಸಂಘಟನೆಗಳು ಆಗ್ರಹಿಸಿವೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಗೌಸ್‌ಮೊಹಿದ್ದೀನ್ ಮಾತನಾಡಿ, ಧರ್ಮಸ್ಥಳದಲ್ಲಿ ೨೦೧೨ ರಲ್ಲಿ ನಡೆದ ಸೌಜನ್ಯ ಬರ್ಬರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ, ವೇದ, ಪದ್ಮಲತಾ, ಅನನ್ಯಭಟ್, ನಾರಾಯಣ, ಯಮುನ ಮತ್ತಿತರೆ ಮಹಿಳೆಯರ ನಾಪತ್ತೆ ಇವುಗಳನ್ನೊಳಗೊಂಡಂತೆ ತನಿಖೆ ಮಾಡಲು ಈಗ ಎಸ್‌ಐಟಿ ವಿಶೇಷ ತನಿಖಾ ತಂಡವನ್ನು ಸರಕಾರ ರಚಿಸಿರುವುದನ್ನು ಸ್ವಾಗತಿಸಿದರು.
ಈಗಾಗಲೇ ನೂರಾರು ಶವಗಳನ್ನು ನಾನೇ ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ಈ ಕೊಲೆಗಳನ್ನು ಮಾಡಿದವರು ಯಾರು ಎಂಬ ಪ್ರಶ್ನೆ ಈಗ ಮುಖ್ಯವಾಗಿದೆ. ಅಲ್ಲದೆ ಈ ವ್ಯಕ್ತಿ ಧರ್ಮಸ್ಥಳದಲ್ಲಿ ಉದ್ಯೋಗಿಯಾಗಿದ್ದೆ ಎಂಬುದರ ಬಗ್ಗೆ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಇರುವುದಾಗಿ ಹೇಳಿಕೆ ನೀಡಿದ್ದಾನೆ. ಹೀಗಾಗಿ ಆತನ ಜೀವಕ್ಕೆ ಅಪಾಯವಿದ್ದು, ಆತನಿಗೆ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ನಡೆದಿರುವ ಅತ್ಯಾಚಾರ, ಕೊಲೆ ಎಲ್ಲವೂ ಸುದ್ದಿಯಾದಾಗ ಅಲ್ಲಿಗೆ ಬರುವ ಭಕ್ತರಿಗೂ ಕೂಡ ಆತಂಕವಾಗುತ್ತದೆ. ಧರ್ಮಸ್ಥಳ ಸುತ್ತಮುತ್ತ ಶೈಕ್ಷಣಿಕ ಸಂಸ್ಥೆಗಳಿದ್ದು, ಅಲ್ಲಿಗೆ ವಿದ್ಯಾರ್ಥಿಗಳು ಬರಲು ಭಯದಿಂದ ಹಿಂಜರಿಯುತ್ತಾರೆ. ಹೀಗಾಗಿ ಈ ಪ್ರಕರಣಗಳ ತನಿಖೆಯನ್ನು ತ್ವರಿತ, ನಿಷ್ಪಕ್ಷಪಾತವಾಗಿ ನಡೆಸಿ ಸತ್ಯ ಏನೆಂಬುದು ಜನರಿಗೆ ಗೊತ್ತಾಗಬೇಕಿದೆ ಮತ್ತು ಯಾವುದೇ ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳಬೇಕು. ಈ ಪ್ರಕರಣಗಳ ಆರೋಪಿಗಳಗೆ ಆದಷ್ಟು ಬೇಗ ಕಾನೂನು ಬದ್ದ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮಹಿಳಾ ಘಟಕದ ವೀಣಾ, ಅರುಣಾಕ್ಷಿ, ಟಿ.ಎಲ್. ಗಣೇಶ್, ಅಶೋಕ್, ಸಂದೀಪ್ ಮತ್ತಿತರರಿದ್ದರು.
Demand for impartial investigation by SIT investigating Dharmasthala cases
Leave a comment