ಚಿಕ್ಕಮಗಳೂರು :
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2023 ರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತಿದ್ದಂತೆ ಇದರ ಕ್ರೆಡಿಟ್ ಪಡೆಯಲು ನಾ ಮುಂದು ತಾ ಮುಂದು ಎಂದು ಎಲ್ಲಾ ಮುಖಂಡರು ಮುಗಿಬಿದ್ದಿದ್ದು ಸುಳ್ಳಲ್ಲ, ಇದರಲ್ಲಿ ಇಬ್ಬರು ಮುಸ್ಲಿಂ ಮುಖಂಡರು ಕೂಡಾ ಇರುವುದು ಸತ್ಯ.
ಈ ವಿಷಯ ಈಗೇಕೆ ಪ್ರಸ್ತಾಪ ಮಾಡ್ತಾ ಇದೀವಿ ಅನ್ನೋದಕ್ಕು ಕಾರಣ ಇದೆ. ಆ ಇಬ್ಬರು ಮುಖಂಡರು ಸದ್ಯ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದ್ದಾರೆ. ಇತ್ತೀಚೆಗೆ ನಡೆದ ಘಟನೆಯೊಂದು ಇದರ ಮುಂದುವರಿದ ಭಾಗವಾಗಿ ಪೊಲೀಸರಿಗೂ ಕಸಿವಿಸಿ ಉಂಟು ಮಾಡಿದೆ.
ಈದ್ ಮಿಲಾದ್ ಹಿಂದಿನ ದಿನ ನಡೆದ ಗಲಾಟೆಯೊಂದು ಇಬ್ಬರು ಮುಖಂಡರ ಬೆಂಬಲಿಗರ ನಡುವಿನ ಸಂಘರ್ಷ ತಾರಕಕ್ಕೇರುವಂತೆ ಮಾಡಿದೆ. ಮುಖಂಡರ ಕೋಲ್ಡ್ ವಾರ್ ಗೆ ಇದು ಮತ್ತಷ್ಟು ತುಪ್ಪ ಸುರಿದಂತಾಗಿದೆ. ಈ ಮಧ್ಯೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಒತ್ತಡಕ್ಕೆ ಒಳಗಾಗಿ ಅನುಸರಿಸಿದ ಇಬ್ಬಗೆಯ ನೀತಿ ಕೂಡ ಸಾಕಷ್ಟು ಚರ್ಚೆಗೆ ಕಾರಣವಾಗಿದೆ . ಅಕ್ಸಾ ಮಸೀದಿ ಬಳಿ ನಡೆದ ಜಗಳದ ನಂತರ ದಾಖಲಾದ ಕೇಸ್ ನಲ್ಲಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹಿಲ್ ಪಾಷ ಬಂಧನಕ್ಕೆ ಒತ್ತಾಯಿಸಿ ಗಾಯಾಳು ಜಹೀರ್ ಕುಟುಂಬದ ಮಹಿಳೆಯರು ಹಾಗೂ ಎಸ್.ಡಿಪಿಐ ಪಕ್ಷದ ಕಾರ್ಯಕರ್ತರಿಂದ ಠಾಣೆ ಮುತ್ತಿಗೆ ಯತ್ನ ಕೂಡಾ ನಡೆದಿದೆ. ಇದರಲ್ಲಿ ಇಬ್ಬರೂ ನಾಯಕರ ಪ್ರತಿಷ್ಟೆ ಅಡಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಕಾಂಗ್ರೆಸ್ ಶಾಸಕ ಹಾಗೂ ಜಿಲ್ಲಾ ಕೇಂದ್ರದ ಪಕ್ಷದ ಪ್ರಮುಖರಿಗೆ ಈ ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟ ತೀವ್ರ ಮುಜುಗರ ತಂದಿರುವುದಂತು ಸತ್ಯ.
ಎರಡೂ ಕಡೆಯವರ ಬೆಂಬಲಿಗರು ಸದ್ಯ ಕೋರ್ಟು ಕೇಸು ಪೊಲೀಸ್ ಸಮಸ್ಯೆ ಎದುರಿಸುತ್ತಿದ್ದು ಇಬ್ಬರ ಪ್ರತಿಷ್ಟೆ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂಬುದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ.
Leave a comment