ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಕ್ರೈಸ್ತ ಮುಖಂಡರುಗಳನ್ನು ಕಡೆಗಣಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರ ವಂಚಿತ ಸಣ್ಣ ಪುಟ್ಟ ಸಮುದಾಯಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಕ್ರೈಸ್ತ ಮುಖಂಡ ರೂಬಿನ್ ಮೊಸಸ್ ಎಚ್ಚರಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದು, ಕ್ರಿಶ್ಚಿಯನ್ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಮುಂದೆ ಬರುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಮುಖಂಡರು ಸ್ಪಂದಿಸಿ ಸಮುದಾಯವನ್ನು ಗುರ್ತಿಸಿ ಅಧಿಕಾರವನ್ನು ನೀಡಿದರೆ ಮಾತ್ರ ಕಾಂಗ್ರೆಸ್‌ಗೆ ಮತ ನೀಡುವುದಾಗಿ ತಿಳಿಸಿದರು.
ಕಳೆದ ೪೦ ವರ್ಷಗಳಿಂದ ಕ್ರೈಸ್ತ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿದಿದ್ದರೂ ಗುರ್ತಿಸದೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಉಪಯೋಗಿಸಿಕೊಂಡು ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಸಂಬಂಧ ಈಗಾಗಲೇ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸಚಿವರು, ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಪಕ್ಷಕ್ಕೆ ಬಂದವರೆಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಪಕ್ಷಕ್ಕೆ ದುಡಿದ ಕ್ರಿಶ್ಚಿಯನ್ ಸಮುದಾಯದ ಮತಗಳನ್ನು ಅವಶ್ಯಕತೆ ಇದ್ದಾಗ ಮತಗಳ ಎಟಿಎಂ ನಂತೆ ಬಳಕೆಮಾಡಿಕೊಳ್ಳುತ್ತಿದ್ದಾರೆಂದು ನಾಮಿನಿ ಹುದ್ದೆಯೂ ಸೇರಿದಂತೆ ಕಾಮಗಾರಿಗಳ ಗುತ್ತಿಗೆವರೆಗೆ ಕೇವಲ ಮೂರ್‍ನಾಲ್ಕು ಜಾತಿ ಜನಾಂಗದವರಿಗೆ ಮಾತ್ರ ಸೀಮಿತವಾಗಿದ್ದು, ಸಣ್ಣ ಪುಟ್ಟ ಜಾತಿಗಳನ್ನು ಗುರ್ತಿಸಿ ಸ್ಥಾನಮಾನ ನೀಡದಿರುವುದು ಕಾರ್ಯಕರ್ತರಿಗೆ ಬೇಸರ ತಂದಿದೆ ಎಂದರು.
ಕ್ರೈಸ್ತರು ಶಾಂತಿಪ್ರಿಯರು, ಕಾಂಗ್ರೆಸ್ ಪಕ್ಷಕ್ಕೆ ಮತನೀಡುತ್ತಾರೆ. ತಿರುಗಿ ಬೀಳುವುದಿಲ್ಲ, ಹೋರಾಟ ಮಾಡುವುದಿಲ್ಲ. ಯಾರ ಮೇಲೂ ದೂರು ನೀಡುವುದಿಲ್ಲ ಎಂಬ ಬಲವಾದ ನಂಬಿಕೆ ಕಾಂಗ್ರೆಸ್ ನಾಯಕರುಗಳಿಗೆ ಇರುವುದರಿಂದಾಗಿ ಸಮುದಾಯವನ್ನು ಕಡೆಗಣಿಸುತ್ತಿದ್ದಾರೆ. ಕಣ್ಣೊರೆಸುವ ತಂತ್ರವಾಗಿ ಸಣ್ಣ ಪುಟ್ಟ ಹುದ್ದೆ ನೀಡುವುದಾದರೆ ಅದರ ಅವಶ್ಯಕತೆ ನಮಗಿಲ್ಲ ಎಂದು ನಿರಾಕರಿಸಿದರು.
ಕ್ರಿಶ್ಚಿಯನ್ ಸಮುದಾಯ ಕೊರೊನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಸಮಾಜ ಸೇವೆ ಮಾಡಿದೆ. ಶಿಕ್ಷಣ, ಆರೋಗ್ಯ ಮುಂತಾದವುಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸುತ್ತಿದ್ದರೂ ಪಕ್ಷದಲ್ಲಿ ಕಡೆಗಣಿಸಿರುವುದು ಸಮುದಾಯಕ್ಕೆ ನೋವುಂಟಾಗಿದೆ ಎಂದು ಹೇಳಿದರು.
ಚುನಾವಣಾ ಪೂರ್ವದಲ್ಲಿ ವೋಟರ್ ಐಡಿ ಇಲ್ಲದವರು ವೋಟರ್ ಐಡಿ ಮಾಡಿಸಿಕೊಳ್ಳುವಂತೆ ಹಾಗೂ ಕಡ್ಡಾಯ ಮತದಾನ ಮಾಡಬೇಕೆಂದು ಚರ್ಚ್‌ಗಳಲ್ಲಿ ಪ್ರಚಾರ ಮಾಡುತ್ತೇವೆ, ಮತದಾರರ ಪಟ್ಟಿಯಲ್ಲಿ ಬಿಟ್ಟುಹೋದ ಹೆಸರುಗಳನ್ನು ಸೇರಿಸುವುದು ಬೇರೆಡೆಯಿಂದ ಆಗಮಿಸುವ ಕ್ರೈಸ್ತರಿಗೆ ಮತ ಚಲಾವಣೆ ಮಾಡಲು ಸ್ವಂತ ಖರ್ಚಿನಿಂದ ಸಹಕರಿಸುತ್ತಿದ್ದು, ಈಗ ಐಡಿ ಕಾರ್ಡ್ ಮ್ಯಾಪಿಂಗ್ ನಡೆಯುತ್ತಿದ್ದು, ಯಾರ ಮತಗಳು ತಪ್ಪಿ ಹೋಗದಂತೆ ಕ್ರೈಸ್ತ ಮುಖಂಡರುಗಳು ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ನಗರಸಭೆ ಸದಸ್ಯರುಗಳಾದ ತೆರೇಸಾ ಲೋಗೋ, ಸುರೇಖಾಸಂಪತ್, ಮುಖಂಡರಾದ ಜೇಮ್ಸ್ ಡಿಸೋಜ, ಅಮರ್, ಸಂಜು ಉಪಸ್ಥಿತರಿದ್ದರು.
Christian leaders ignored in the District Congress Party
Leave a comment