ಮೂಡಿಗೆರೆ: ಅಂಗನವಾಡಿ ಕೇಂದ್ರಗಳು ಕೇವಲ ಮಕ್ಕಳ ಆರೈಕೆ, ಶಾಲಾ ಪೂರ್ವ ಚಟುವಟಿಕೆ ಮಾತ್ರವಲ್ಲ, ಗರ್ಭಿಣಿ ಹಾಗೂ ಬಾಂಣಂತಿಯರ ಪೌಷ್ಟಿಕಾಂಶ ಶಿಕ್ಷಣ ಹಾಗೂ ಪೂರಕ ಆಹಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ಹೇಳಿದರು.
ಅವರು ಮಂಗಳವಾರ ಹೆಸಗಲ್ ಗ್ರಾಮದಲ್ಲಿ ೧೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ತನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ೩೦೦ ಅಂಗನವಾಡಿ ಕೇಂದ್ರಗಳಿವೆ. ಕೆಲವೆಡೆ ಸ್ವಂತ ಕಟ್ಟಡವಿದ್ದು, ಕೆಲವೆಡೆ ಬಾಡಿಗೆ ಕಟ್ಟಡ ಹಾಗೂ ಸರಕಾರಿ ಕಟ್ಟಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ತಾನು ಶಾಸಕರಾದ ಬಳಿಕ ಬಹುತೇಕ ಕಡೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ಇನ್ನು ೩ ವರ್ಷದಲ್ಲಿ ಎಲ್ಲಾ ಕಡೆ ಸ್ವಂತ ಕಟ್ಟಡ ನಿರ್ಮಿಸುವ ಗುರಿ ಹೊಂದಿದ್ದೇನೆ. ಮಕ್ಕಳು ಮುಂದಿನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯಲು ಅಂಗನವಾಡಿ ಕೇಂದ್ರಗಳು ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಮಾತನಾಡಿ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಮೊದಲ ಹಂತದ ಶಿಕ್ಷಣ ಮತ್ತು ಸಾಂಸ್ಕೃತಿಕ ಚಟುವಟಿಕೆ ಹಾಗೂ ಪೌಷ್ಠಿಕ ಆಹಾರ ಒದಗಿಸಲಾಗುತ್ತದೆ ಎಂದ ಅವರು, ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಸದವರು ಇನ್ನೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಜೋಗಣ್ಣಕೆರೆ, ಹಾಲೂರು, ಜಿ.ಹೊಸಳ್ಳಿ, ಗುತ್ತಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಬಳಿಕ ಮೂಲರಹಳ್ಳಿ ರಸ್ತೆಯಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಹಾನಿಯಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ರಸ್ತೆ ದುರಸ್ತಿಪಡಿಸಲು ಪಂಚಾಯತ್ ರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಕಾರ್ಯದರ್ಶಿ ಸಂಪತ್, ಬಿಳಗುಳ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರು ಒಡೆಯರ್, ಸುಧಾ ಮಂಜುನಾಥ್, ಪ್ರಜಾವತಿ, ಸಿ.ಎಚ್.ಅಹಮದ್ ಬಾವ, ಸಂಪತ್, ಮೋಯ್ದಿನ್ ಸೇಟ್, ಸುರೇಂದ್ರ ಉಗ್ಗೆಹಳ್ಳಿ, ತಾಪಂ ಸಹಾಯಕ ನಿರ್ದೇಶಕ ನವೀನ್, ಸಿಡಿಪಿಒ ಶೋಭಾ, ಹೆಸಗಲ್ ಗ್ರಾ.ಪಂ. ಪಿಡಿಒ ಸೌಮ್ಯಾ ಮತ್ತಿತರರಿದ್ದರು.
Child Care-Preschool Activity Anganwadi Center Cooperative
Leave a comment