ಚಿಕ್ಕಮಗಳೂರು: ಅಕ್ರಮವಾಗಿ ತನ್ನ ತಾಯಿಯ ಹೆಸರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರು ಮಾಡಿಸಿಕೊಂಡಿದ್ದ ಬಿಲ್ ಕಲೆಕ್ಟರ್ ಹಾಗೂ ಪಿಡಿಒಗೆ ತಲಾ ಒಂದು ವರ್ಷ ಸಜೆ ಹಾಗೂ ೧೫ ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ತೀರ್ಪು ನೀಡಿದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಕೆಳಗೂರು ಗ್ರಾಮ ಪಂಚಾಯಿತಿಯಲ್ಲಿ ೨೦೧೦-೧೧ನೇ ಸಾಲಿನಲ್ಲಿ ಬಿಲ್ ಕಲೆಕ್ಟರ್ ಆಗಿದ್ದ ಎಂ.ಎನ್.ಮಂಜುನಾಥ್ ತನ್ನ ತಾಯಿಗೆ ಅರ್ಹತೆ ಇಲ್ಲದಿದ್ದರೂ ಸರ್ಕಾರದ ಬಸವ ವಸತಿ ಯೋಜನೆಯಡಿ ಕಾನೂನು ಬಾಹಿರವಾಗಿ ಮನೆ ಮಂಜೂರು ಮಾಡಿಸಿಕೊಂಡು ಈ ಸಂಬಂಧ ಸರ್ಕಾರದಿಂದ ಬಿಡುಗಡೆಯಾದ ಹಣವನ್ನೂ ಪಡೆದುಕೊಂಡಿದ್ದರು. ಗ್ರಾಮ ಪಂಚಾಯಿತಿಯಲ್ಲಿ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸುವ ಸಂದರ್ಭ ಮಂಜುನಾಥನ ತಾಯಿಯನ್ನು ಆಯ್ಕೆ ಮಾಡಿರಲಿಲ್ಲ. ಆದರೆ ಫಲಾನುಭವಿಗಳ ಪಟ್ಟಿಯನ್ನು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸುವ ಸಂದರ್ಭ ಮಂಜುನಾಥ ಅಂದಿನ ಪಿಡಿಒ ಕೆ.ಎಂ.ಲಕ್ಷ್ಮಣಗೌಡ ಜೊತೆ ಸೇರಿ ತನ್ನ ತಾಯಿಯ ಹೆಸರನ್ನು ಸೇರಿಸಿದ್ದರು.
ಈ ಸಂಬಂಧ ಆರೋಪಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಹಾಗೂ ಐಪಿಸಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಅಂದಿನ ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನ ವಿ.ರಾಜು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಗೌರವಾನ್ವಿತ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ಆರೋಪಿಗಳಿಗೆ ಒಂದು ವರ್ಷ ಸಜೆ ಹಾಗೂ ೧೫ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಲೋಕಾಯುಕ್ತದ ಪರವಾಗಿ ಲೋಕಾಯುಕ್ತ ವಿಶೇಷ ಸರ್ಕಾರಿ ಅಭಿಯೋಜಕ ವಿ.ಟಿ.ಥೋಮಸ್ ವಾದ ಮಂಡಿಸಿದ್ದರು.
Bill collector-PDO sentenced to one year in jail
Leave a comment