ಎನ್. ಆರ್ ಪುರ: ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಬಳಿ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ
ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಮೃತರನ್ನು 21 ವರ್ಷದ ಗೋಕುಲ್ ಎಂದು ಗುರುತಿಸಲಾಗಿದೆ. ಗೋಕುಲ್ ತನ್ನ ಕೆಎ-18 ಇಹೆಚ್ 4297 ಸಂಖ್ಯೆಯ ಬೈಕಿನಲ್ಲಿ ಅರುಣ್ ಮತ್ತು ಪ್ರವೀಣ್ ಎಂಬುವವರೊಂದಿಗೆ ಬಾಳೆಹೊನ್ನೂರು ಕಡೆಗೆ ತೆರಳುತ್ತಿದ್ದರು.
ಮಸೀದಿಕೆರೆಯ ಗುಡ್ ಲಕ್ ಮೆಡಿಕಲ್ ಮಾಲೀಕರ ಮನೆಯ ಎದುರು ಬೈಕ್ ಸಾಗುತ್ತಿದ್ದಾಗ, ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಈ ಅಪಘಾತದ ತೀವ್ರತೆಗೆ ಬೈಕಿನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟಿದ್ದು ಗೋಕುಲ್ ಅವರ ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದ ಕಾರಣ ಅವರು ಮೃತಪಟ್ಟಿದ್ದಾರೆ.
ಬೈಕಿನಲ್ಲಿದ್ದ ಮತ್ತಿಬ್ಬರಾದ ಅರುಣ್ ಅವರ ತಲೆ ಮತ್ತು ಹಲ್ಲಿಗೆ ಪೆಟ್ಟಾಗಿದ್ದು, ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರವೀಣ್ ಅವರ ಹೊಟ್ಟೆ ಮತ್ತು ಕಾಲಿಗೆ ರಕ್ತಗಾಯಗಳಾಗಿದ್ದು, ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮೃತನ ತಾಯಿ ಪುಷ್ಪಾ ಅವರು ನೀಡಿದ ಲಿಖಿತ ದೂರಿನ ಮೇರೆಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Biker dies in road accident
Leave a comment