ಚಿಕ್ಕಮಗಳೂರು: ಪಹಲ್ಗಾಮ್ ನಲ್ಲಿ ನಡೆದ ಉಗ್ರ ದಾಳಿ ಹಾಗೂ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ಪ್ರಕರಣವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುತ್ತಿದ್ದಾರೆಯೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಎಂಬ ಅನುಮಾನ ಚಿಕ್ಕಮಗಳೂರಿನಲ್ಲಿ ನೀಡಿರುವ ಅವರ ಹೇಳಿಕೆಯಿಂದಾಗಿ ಕಾಡಲಾರಂಭಿಸಿದೆ.
ಭಾನುವಾರ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಹಲ್ಗಾಮ್ ದಾಳಿಯಲ್ಲಿ 26 ಜನ ಮೃತಪಟ್ಟರು. ಇದು ಕೇಂದ್ರ ಸರ್ಕಾರದ ವೈಫಲ್ಯ. ಆದರೆ ನಾವು ಪ್ರಧಾನ ಮಂತ್ರಿ ರಾಜೀನಾಮೆ ಕೇಳಿದ್ದೆವೆಯೇ? ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿಯೂ ವೈಫಲ್ಯವಾಗಿದೆ ನಿಜ. ಆದರೆ ಯಾರೂ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.
ರಾಜ್ಯದಲ್ಲಿ ಹಿಂದೆ ಬೇರೆ ಸರ್ಕಾರಗಳು ಇದ್ದಾಗ ಸಾಕಷ್ಟು ಘಟನೆಗಳು ನಡೆದಿವೆ. ಆಗ ನಾವು ಯಾರ ರಾಜೀನಾಮೆಯನ್ನು ಕೇಳಿರಲಿಲ್ಲ. ಕೆಲ ದಿನಗಳ ಹಿಂದೆ ಪಾಕಿಸ್ತಾನದ ಜೊತೆ ಯುದ್ಧ ಆರಂಭವಾದಾಗ ಎಲ್ಲಾ ಪಕ್ಷಗಳು ಬಿಜೆಪಿ ಜೊತೆ ಕೈಜೋಡಿಸಿದವು. ಇದನ್ನು ಪ್ರತಿಯೊಬ್ಬರೂ ಮನಗಾಣಬೇಕು ಎಂದು ಹೇಳಿದರು.
ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ಯಾರು ಅನುಮತಿ ಕೇಳಿದರು, ಅನುಮತಿ ನೀಡಲು ಯಾರು ನಿರಾಕರಿಸಿದರು, ಬಳಿಕ ಅನುಮತಿ ಕೊಟ್ಟವರು ಯಾರು ಎಂಬುದು ಯಾರಿಗೂ ಗೊತ್ತಿಲ್ಲ. ಇದೆಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ. ಯಾರು ತಮ್ಮ ಕೆಲಸ ಸರಿಯಾಗಿ ಮಾಡಿಲ್ಲ ಎನ್ನುವುದು ತನಿಖೆಯಿಂದ ಹೊರ ಬರಬೇಕು ಎಂದರು.
ಕಮಿಷನರ್, ಡಿಸಿಪಿ, ಇನ್ಸ್ಪೆಕ್ಟರ್, ಪೊಲೀಸ್ ಹೀಗೆ ವಿವಿಧ ಹಂತದಲ್ಲಿ ಏನೇನು ಆಗಿದೆ ಎಂಬ ಸತ್ಯ ತನಿಖೆಯಿಂದ ಹೊರ ಬರಬೇಕು. ಬೆಂಗಳೂರು ಘಟನೆ ಬಗ್ಗೆ ಹೈಕಮಾಂಡ್ ಗೆ ಜವಾಬ್ದಾರಿ ಇದೆ. ಹೀಗಾಗಿ ದೆಹಲಿಗೆ ಕರೆಸಿ ವರದಿ ಕೇಳಬಹುದು. ಮುಂದೆ ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲು ಸೂಚನೆ ಕೊಡಬಹುದು ಎಂದು ತಿಳಿಸಿದರು.
ಸಿಎಂ ಬದಲಾವಣೆ ಇದೆಯೇ ಎಂಬ ಪ್ರಶ್ನೆಗೆ ನಸುನಕ್ಕ ಸತೀಶ್ ಜಾರಕಿಹೊಳಿ, ಅದೇಗೆ ಸಿಎಂ ಬದಲಾವಣೆಯಾಗುತ್ತಾರೆ? ನಿಮಗೆ ಹೇಳಿದ್ದು ಯಾರು? ಸಿಎಂ ಅಧಿಕಾರಾವಧಿ ಎರಡೂವರೆ ವರ್ಷ ಎಂದು ಹೇಳಿದವರು ಯಾರು ಎಂದು ಪ್ರಶ್ನಿಸಿದ ಅವರು, ಎರಡೂವರೆ ವರ್ಷ ಎಂದು ಎಲ್ಲೂ ಇಲ್ಲ. ಈಗಲೂ ಸಿಎಂ ಸಿದ್ದರಾಮಯ್ಯ ಅವರೇ ಇದ್ದಾರೆ. ಮುಂದೆಯೂ ಅವರೇ ಇರುತ್ತಾರೆ ಅಷ್ಟೇ ಎಂದು ಪ್ರತಿಕ್ರಿಯಿಸಿದರು.
ಬೆಳಗಾವಿ ವಿಭಜನ ಸಧ್ಯಕ್ಕಿಲ್ಲ. ಆಮೇಲೆ ವಿಭಜನೆ ಮಾಡಬಹುದು. ಬೆಳಗಾವಿ ವಿಭಜನೆ ಮಾಡುವ ಪ್ರಸ್ತಾವವೇನೋ ಇದೆ. ಆದರೆ ಅದು ಸಧ್ಯಕ್ಕಿಲ್ಲ ಎಂದು ಹೇಳಿದರು.
ಶಾಸಕ ಎಚ್.ಡಿ.ತಮ್ಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಮಾಜಿ ಸಂಸದ ಚಂದ್ರಪ್ಪ, ಪ್ರಮುಖರಾದ ಡಾ. ಡಿ.ಎಲ್.ವಿಜಯ್ ಕುಮಾರ್, ಹಿರೇಮಗಳೂರು ರಾಮಚಂದ್ರ ಮತ್ತಿತರರಿದ್ದರು.
Bengaluru stampede is a failure of the government but there is no need to resign
Leave a comment