ಚಿಕ್ಕಮಗಳೂರು: ಜಿಲ್ಲೆಯಲ್ಲಿ ನೂತನವಾಗಿ ೧೫೦ ಟವರ್ ನಿರ್ಮಾಣ ಮಾಡುವಂತೆ ಕೇಂದ್ರ ದೂರಸಂಪರ್ಕ ಇಲಾಖೆ ಸಚಿವ ಜ್ಯೋತಿರಾಧ್ಯ ಸಿಂಧ್ಯ ಅವರಿಗೆ ಮನವಿ ಮಾಡಲಾಗಿತ್ತು. ನಮ್ಮ ಮನವಿ ಪುರಸ್ಕರಿಸಿ ಜಿಲ್ಲೆಯಲ್ಲಿ ೧೫೦ ನೂತನ ಟವರ್ ಆರಂಭಿಸಲು ಅನುಮೋದನೆ ನೀಡಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಬಿಎಸ್‌ಎನ್‌ಎಲ್ ಕಚೇರಿ ಸಭಾಂಗಣದಲ್ಲಿ ಬುಧವಾರ ಬಿಎಸ್‌ಎನ್‌ಎಲ್ ಅಧಿಕಾರಿಗಳು ಹಾಗೂ ಬಿಎಸ್‌ಎನ್‌ಎಲ್ ಸಲಹಾ ಸಮಿತಿ ಸದಸ್ಯರ ಸಭೆ ನಡೆಸಿದ ಅವರು, ನೂತನ ಟವರ್‌ಗಳು ನಿರ್ಮಾವಾದಲ್ಲಿ ಜಿಲ್ಲೆಯಲ್ಲಿ ನೆಟ್ವರ್ಕ್ ಸಮಸ್ಯೆ ಒಂದು ಹಂತಕ್ಕೆ ಪರಿಹಾರವಾದಂತಾಗುತ್ತದೆ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ಬಿಎಸ್‌ಎನ್‌ಎಲ್ ಸಾಕಷ್ಟು ಸುಧಾರಿಸಿದೆ. ಆದರೂ ಹಲವು ಸಮಸ್ಯೆಗಳು ಇನ್ನೂ ಹಾಗೆಯೇ ಇವೆ. ನಾವು ಎಷ್ಟೇ ಸುಧಾರಿಸಿದ್ದರೂ ಗ್ರಾಹಕರ ನಿರೀಕ್ಷೆ ಇನ್ನೂ ಹೆಚ್ಚಾಗಿದೆ. ಹೀಗಾಗಿ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಸೇವೆ ಸಲ್ಲಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಟವರ್‌ಗಳಿಗೆ ಇನ್ನೂ ೨೫ ಬ್ಯಾಟರಿಗಳು ಬರಬೇಕಾಗಿದೆ. ಇನ್ನು ಟವರ್‌ಗಳಿಗೆ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಮಲೆನಾಡು ಭಾಗದಲ್ಲಿ ಒಮ್ಮೆ ಕರೆಂಟ್ ಹೋದರೆ ಐದಾರು ದಿನಗಳು ಬರುವುದೇ ಇಲ್ಲ. ಮಲೆನಾಡಿನಲ್ಲಿ ಮಳೆಗಾಲದ ಅವಧಿಯಲ್ಲಿ ಸೋಲಾರ್ ಕೆಲಸ ಮಾಡುವುದಿಲ್ಲ. ಇಂಥ ಸಮಸ್ಯೆಗಳನ್ನು ಪರಿಹರಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದರು.
೫೦೦ ಕುಟುಂಬಗಳಿದ್ದರೆ ಅಲ್ಲಿಗೆ ಒಂದು ಟವರ್ ನಿರ್ಮಾಣ ಮಾಡಲು ಅವಕಾಶವಿದೆ. ಆದರೆ ಮಲೆನಾಡು ಭಾಗದಲ್ಲಿ ಮನೆಗಳ ಸಂಖ್ಯೆ ಕಡಿಮೆ ಇರುತ್ತದೆ. ಹೀಗಾಗಿ ೩೦೦ ಮನೆಗಳು ಇರುವ ಕಡೆಯೂ ಟವರ್ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸದಾಗಿ ಟವರ್ ಆರಂಭಿಸುವ ಜೊತೆಗೆ ಇರುವ ಟವರ್‌ಗಳನ್ನು ಮೇಲ್ದರ್ಜೆಗೇರಿಸಿ ೪ಜಿ ನೆಟ್ವರ್ಕ್ ಒದಗಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿರುವ ೨೧೭ ಬಿಎಸ್‌ಎನ್‌ಎಲ್ ಟವರ್‌ಗಳಲ್ಲಿ ಈಗಾಗಲೇ ೧೯೦ನ್ನು ೪ಜಿಗೆ ಮೇಲ್ದರ್ಜೆಗೇರಿಸಲಾಗಿದೆ. ಇನ್ನುಳಿದವುಗಳನ್ನೂ ಕೂಡಲೇ ಮೆಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು. ಇದರೊಂದಿಗೆ ಹೊಸ ಟವರ್ ನಿರ್ಮಾಣ ಮಾಡುವುದರಿಂದ ಜನರಿಗೆ ಇನ್ನಷ್ಟು ಸೇವೆ ಒದಗಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಬಿಎಸ್‌ಎನ್‌ಎಲ್ ಶಿವಮೊಗ್ಗ-ಚಿಕ್ಕಮಗಳೂರು ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ಸಿನ್ಹಾ, ಡಿಜಿಎಂ ಬಾಲಾಜಿ, ಎಜಿಎಂ ಗೋಪಾಲಕೃಷ್ಣ, ಸಲಹಾ ಸಮಿತಿ ಸದಸ್ಯರಾದ ಆಲ್ದೂರು ಶಶಿ, ವಿನೋದ್ ಬೊಗಸೆ, ಸೋಮಶೇಖರ್, ಪ್ರಮುಖರಾದ ಎಚ್.ಸಿ.ಕಲ್ಮರುಡಪ್ಪ, ಹಿರೇಮಗಳೂರು ಪುಟ್ಟಸ್ವಾಮಿ, ದೀಪಕ್ ದೊಡ್ಡಯ್ಯ ಮತ್ತಿತರರಿದ್ದರು.
Approval for opening 150 new towers in the district
Leave a comment