ಚಿಕ್ಕಮಗಳೂರು: ಕಾಫಿನಾಡಿನ ಜನರಿಗೆ ರೈಲ್ವೇ ಇಲಾಖೆ ಸಿಹಿ ಸುದ್ದಿ ನೀಡಿದೆ. ಚಿಕ್ಕಮಗಳೂರಿನಿಂದ ಹಿಂದೂಗಳ ಶ್ರದ್ಧಾಕೇಂದ್ರ ತಿರುಪತಿಗೆ ಹೊಸ ರೈಲು ಸಂಚಾರಕ್ಕೆ ಅನುಮೋದನೆ ನೀಡಿದೆ. ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಅವಿರತ ಪ್ರಯತ್ನದ ಫಲವಾಗಿ ಜಿಲ್ಲೆಯ ಜನರ ಬಹುದಿನದ ಕನಸು ಇದೀಗ ನನಸಾಗಿದೆ.
ರಾಜ್ಯ ರೈಲ್ವೆ ಖಾತೆ ಸಚಿವ ಸೋಮಣ್ಣರವರ ಸಹಕಾರದೊಂದಿಗೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಚಿಕ್ಕಮಗಳೂರು-ಬೆಂಗಳೂರು-ತಿರುಪತಿ ಎಕ್ಸ್ ಪ್ರೆಸ್ ರೈಲಿಗೆ ಅನುಮೋದನೆ ನೀಡಿದ್ದಾರೆ. ಸಧ್ಯ ಈ ರೈಲು ಪ್ರಾಯೋಗಿಕವಾಗಿ ವಾರಕ್ಕೊಂದು ಬಾರಿ ಸಂಚಾರ ನಡೆಸಲಿದ್ದು, ಪ್ರತಿ ಶುಕ್ರವಾರ ಸಂಜೆ ೫.೩೦ ಕ್ಕೆ ಚಿಕ್ಕಮಗಳೂರು ಬಿಟ್ಟು, ಶನಿವಾರ ಬೆಳಗ್ಗೆ ೭.೪೦ ಕ್ಕೆ ತಿರುಪತಿ ತಲುಪಲಿದೆ.
ತಿರುಪತಿಯಿಂದ ಚಿಕ್ಕಮಗಳೂರಿಗೆ ಪ್ರತಿ ಗುರುವಾರ ರಾತ್ರಿ ೯ ಕ್ಕೆ ರೈಲು ಹೊರಡಲಿದ್ದು, ಶುಕ್ರವಾರ ಬೆಳಗ್ಗೆ ೧೦.೩೦ ಕ್ಕೆ ಚಿಕ್ಕಮಗಳೂರು ತಲುಪಲಿದೆ.
ಚಿಕ್ಕಮಗಳೂರು ನಿಲ್ದಾಣದಿಂದ ಹೊರಡುವ ರೈಲು ಮಾರ್ಗ ಮಧ್ಯೆ ಸಖರಾಯಪಟ್ಟಣ, ಬಿಸಲೇಹಳ್ಳಿ, ಕಡೂರು, ಬೀರೂರು, ದೇವನೂರು, ಅರಸೀಕರೆ, ತಿಪಟೂರು, ತುಮಕೂರು, ಚಿಕ್ಕಬಾಣಾವರ, ಬೆಂಗಳೂರು, ಕೆ.ಆರ್.ಪುರಂ. ವೈಟ್ ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಜೋಲಾರ್‌ಪೇಟ್, ಕಟ್ಪಾಡಿ, ಚಿತ್ತೂರು ಹಾಗೂ ಪಾಕಲಾದಲ್ಲಿ ನಿಲುಗಡೆ ನೀಡಲಿದೆ.
ತಿರುಪತಿಗೆ ನೇರ ರೈಲು ಬಿಟ್ಟಿರುವುದರಿಂದ ಚಿಕ್ಕಮಗಳೂರು ತಾಲ್ಲೂಕು ಸೇರಿದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಜನತೆಗೆ ಅನುಕೂಲವಾಗಲಿದೆ. ಮಲೆನಾಡಿನ ೫ ತಾಲ್ಲೂಕುಗಳ ಜನರು ಜಿಲ್ಲಾ ಕೇಂದ್ರ ಚಿಕ್ಕಮಗಳೂರಿನಿಂದ ರೈಲು ಹತ್ತಲು ಅನುಕೂಲವಾದರೆ, ಬಯಲಿನ ೪ ತಾಲ್ಲೂಕುಗಳ ಜನರು ಕಡೂರು ಅಥವಾ ಬೀರೂರು ರೈಲ್ವೇ ನಿಲ್ದಾಣದಿಂದ ಪ್ರಯಾಣ ಬೆಳೆಸಲು ಅನುಕೂಲವಾಗಿದೆ.
ಪ್ರಯಾಣಿಕರ ಬೇಡಿಕೆಯ ಮೇರೆಗೆ ನಂತರದ ದಿನಗಳಲ್ಲಿ ವಾರಕ್ಕೆ ಮೂರು ದಿನ ರೈಲು ಓಡಿಸುವ ಯೋಜನೆಯನ್ನು ಸಿದ್ಧಪಡಿಸಲಾಗಿದೆ.
ಈ ರೈಲಿನ ಪ್ರಯೋಜನವನ್ನು ಬಳಸಿಕೊಳ್ಳುವಂತೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮನವಿ ಮಾಡಿದ್ದಾರೆ. ಚಿಕ್ಕಮಗಳೂರಿಗೆ ಹೊಸ ರೈಲು ಘೋಷಣೆ ಆಗಿರುವುದರಿಂದ ಸಂಸದರಿಗೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
Approval for new train service from Chikkamagaluru to Tirupati
Leave a comment