ಚಿಕ್ಕಮಗಳೂರು: ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಅಂಬಳೆ ಹೋಬಳಿ ಮಳಲೂರು ಗ್ರಾಮದಲ್ಲಿರುವ ೧೮ ಎಕರೆ ಗೋಮಾಳ ಜಮೀನಿನಲ್ಲಿ ನಿವೇಶನ ರಹಿತ ಪರಿಶಿಷ್ಟ ಕುಟುಂಬದವರಿಗೆ ನಿವೇಶನ ನೀಡುವಂತೆ ಆಗ್ರಹಿಸಿ ಇಂದು ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಭೀಮ್ ಆರ್ಮಿ, ಯುವ ಬ್ರಿಗೇಡ್, ಅಂಬೇಡ್ಕರ್ ಯುವಕ ಸಂಘ ಮಳಲೂರು ಗ್ರಾಮಸ್ಥರೊಂದಿಗೆ ನಗರಕ್ಕಾಗಮಿಸಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿ ಮಳಲೂರು ಗ್ರಾಮದ ಸರ್ವೆ ನಂ.೭೮, ೭೯ ರಲ್ಲಿ ೯.೨೪ ಹಾಗೂ ೮.೩೫ ಎಕರೆ ಗೋಮಾಳ ಜಮೀನು ಇದ್ದು, ಇದನ್ನು ನಿವೇಶನ ರಹಿತರಿಗೆ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿರುವ ಪರಿಶಿಷ್ಟ ಜನಾಂಗದ ೧೫೦ ಕುಟುಂಬದವರು ನೂರಾರು ವರ್ಷಗಳಿಂದ ವಾಸಿಸುತ್ತಿದ್ದು, ಒಂದು ಕುಟುಂಬದಲ್ಲಿ ೮-೧೦ ಜನರಿದ್ದು, ಮನೆಗಳಿಲ್ಲದೆ ತುಂಬ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಭೀಮ್ ಆರ್ಮಿ ಮುಖಂಡ ಹೊನ್ನೇಶ್ ಮಾತನಾಡಿ, ನಿವೇಶನ ನೀಡುವಂತೆ ಒತ್ತಾಯಿಸಿ ಪರಿಶಿಷ್ಟ ಜಾತಿ ಜನಾಂಗದವರು ೨೦೧೮ ರಲ್ಲೇ ಗ್ರಾಮ ಪಂಚಾಯಿತಿಗೆ ಮಳಲೂರು ಗ್ರಾಮಸ್ಥರು ಮನವಿ ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದರು.
ದೌರ್ಜನ್ಯ ತಡೆ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ ಮಾತನಾಡಿ, ಸಂವಿಧಾನದ ಆಶಯದಂತೆ ಪ್ರಾಥಮಿಕ ಸೌಲಭ್ಯಗಳಾದ ನಿವೇಶನ, ಮನೆ, ಶಿಕ್ಷಣ, ಆರೋಗ್ಯ ನೀಡಬೇಕೆಂದು ಡಾ. ಬಿ.ಆರ್ ಅಂಬೇಡ್ಕರ್ ಹೇಳಿದ್ದರೂ ಕಾರ್ಯರೂಪಕ್ಕೆ ತರುವಲ್ಲಿ ವಿಳಂಭವಾಗುತ್ತಿದೆ ಎಂದು ದೂರಿದರು.
ಸ್ವತಂತ್ರ ಬಂದು ೭೯ ವರ್ಷಗಳಾದರೂ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಡವರಿಗೆ ಮೂಲಭೂತ ಹಕ್ಕುಗಳನ್ನು ಪಡೆಯುವಲ್ಲಿ ವಿಫಲರಾಗಿದ್ದು, ಮಳಲೂರು ಗ್ರಾಮದಲ್ಲಿ ೧೫೦ ಪರಿಶಿಷ್ಟ ಜನಾಂಗದ ಕುಟುಂಬಗಳು ವಾಸಿಸುತ್ತಿದ್ದು, ಬಲಾಢ್ಯರು ಒತ್ತುವರಿ ಮಾಡಿರುವ ಭೂಮಿಯನ್ನು ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ತೆರವು ಮಾಡಿ ನಿವೇಶನ ರಹಿತರಿಗೆ ನಿವೇಶನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ಗ್ರಾಮಸ್ಥರಾದ ಪವಿತ್ರ ಮಾತನಾಡಿ, ದಲಿತ ಕುಟುಂಬದ ಬಡವರಿಗೆ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಮಲ್ಲಯ್ಯ, ನಳಿನ, ಸುಶೀಲ, ಗಂಗಮ್ಮ, ಪಾರ್ವತಮ್ಮ, ಗಂಗಮ್ಮ, ಪುಟ್ಟಮ್ಮ, ಮಂಜುಳ, ಲಕ್ಷ್ಮಮ್ಮ, ಚಂದ್ರಮ್ಮ, ಸುಶೀಲ, ಸಾವಿತ್ರಿ, ಭಾಗ್ಯ, ಹೂವಮ್ಮ, ಇಂದ್ರಾಣಿ ಮತ್ತಿತರರು ಉಪಸ್ಥಿತರಿದ್ದರು.
Appeal to the district administration demanding a site
Leave a comment