ಚಿಕ್ಕಮಗಳೂರು: ಮಧ್ಯಸ್ಥಿಕೆದಾರರು ಹಾಗೂ ವಕೀಲರು ಕಕ್ಷಿದಾರರ ಮನವೊಲಿಸುವ ಮೂಲಕ ಜುಲೈ ಒಂದರಿಂದ ಹಮ್ಮಿಕೊಳ್ಳಲಾಗಿರುವ ೯೦ ದಿನಗಳ ಮಧ್ಯಸ್ಥಿಕೆ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅವರು ಕೋರಿದರು.
ಜುಲೈ ೧೨ ರಂದು ನಡೆದ ಲೋಕ ಅದಾಲತ್‌ನ ಯಶಸ್ಸಿನ ಹಿನ್ನೆಲೆಯಲ್ಲಿ ವಕೀಲರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ನಗರದ ವಕೀಲರ ಸಂಘದ ಕಾರ್ಯಾಲಯದಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಮಧ್ಯಸ್ಥಿಕೆಯಲ್ಲಿ ಪ್ರಕರಣಗಳನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, `ದೇಶಕ್ಕಾಗಿ ೯೦ ದಿನಗಳ ಮಧ್ಯಸ್ಥಿಕೆ’ ವಿಶೇಷ ಅಭಿಯಾನವನ್ನು ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಲಾಗುತ್ತಿದೆ. ಜುಲೈ ಒಂದರಿಂದ ಈ ಅಭಿಯಾನ ಆರಂಭವಾಗಿದ್ದು, ಅಕ್ಟೋಬರ್ ೭ ರವರೆಗೆ ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೂಡ ಮಧ್ಯಸ್ಥಿಕೆದಾರರು ಇದ್ದು, ವಕೀಲರು ಸಹ ಕೈಜೋಡಿಸಬೇಕು. ಇದರಿಂದ ಅಭಿಯಾನ ಯಶಸ್ವಿಯಾಗಲಿದೆ ಎಂದು ತಿಳಿಸಿದರು.
ಅಪಘಾತ ಪ್ರಕರಣ, ಕೌಟುಂಬಿಕ ದೌರ್ಜನ್ಯ, ಚೆಕ್‌ಬೌನ್ಸ್ ಪ್ರಕರಣ, ವಾಣಿಜ್ಯ ಕಲಹ ಪ್ರಕರಣ, ಸೇವಾ ವಿಷಯದ ಪ್ರಕರಣ, ರಾಜಿ ಮಾಡಿಕೊಳ್ಳಬಹುದಾದ ಕ್ರಿಮಿನಲ್ ಪ್ರಕರಣ, ಗ್ರಾಹಕರ ವ್ಯಾಜ್ಯ, ಸಾಲ ಮರುಪಾವತಿ ವ್ಯಾಜ್ಯ, ವಿಭಾಗದ ದಾವೆ, ಎವಿಕ್ಷನ್ ದಾವೆ, ಭೂಸ್ವಾಧೀನ ದಾವೆ, ಇತರ ಸಿವಿಲ್ ವ್ಯಾಜ್ಯಗಳನ್ನು ಈ ಅಭಿಯಾನದಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು. ಈ ರೀತಿ ಇತ್ಯರ್ಥವಾದರೆ ನ್ಯಾಯಾಲಯದ ಮುಂದೆ ಪ್ರಕರಣಗಳೇ ಇರುವುದಿಲ್ಲವೆಂದು ಭಾವಿಸಬೇಕಿಲ್ಲ. ಮತ್ತೆ ಮತ್ತೆ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ ಎಂದು ಹೇಳಿದರು.
ಈ ಬಾರಿ ಲೋಕ ಅದಾಲತ್‌ನಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ೪,೪೯೮ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಪೂರ್ವ ವ್ಯಾಜ್ಯದಲ್ಲಿ ೪೫,೫೦೫ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಕಳೆದ ಬಾರಿ ಬಾಕಿ ಇದ್ದ ೩೦೬೪ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದ್ದು. ಕಳೆದ ಬಾರಿಗಿಂತ ಹೆಚ್ಚು ಸಾಧನೆಯಾಗಿದೆ. ಕಳೆದ ಬಾರಿ ಪೂರ್ವ ವ್ಯಾಜ್ಯದಲ್ಲಿ ೨೪,೦೨೬ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಆದ ವಿ.ಹನುಮಂತಪ್ಪ ಮಾತನಾಡಿ, ಕಡೂರು ನ್ಯಾಯಾಲಯದ ೨೬ ಹಳೆಯ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ಅಲ್ಲದೆ, ಈ ಅದಾಲತ್‌ನಲ್ಲಿ ದಾಂಪತ್ಯ ಹಕ್ಕುಗಳಿಗೆ ಸಂಬಂಧಿಸಿದ ಅಂದರೆ ವಿಚ್ಚೇದನ ಹಾಗೂ ಜೀವನಾಂಶ ಕೋರಿದ ೯ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಆ ದಂಪತಿಗಳನ್ನು ಸಂಧಾನಗೊಳಿಸಲಾಗಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ಐದು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಕಡೂರು ೨, ತರೀಕೆರೆ ೧, ಕೊಪ್ಪದ ೧ ಪ್ರಕರಣಗಳು ಇವುಗಳಲ್ಲಿ ಸೇರಿವೆ. ಇದೀಗ ನಡೆಯುತ್ತಿರುವ ಅಭಿಯಾನದಲ್ಲಿ ಸರ್ವರೂ ಸಹಕಾರ ನೀಡಿದಲ್ಲಿ ಕಕ್ಷಿದಾರರು ಶೀಘ್ರ ನ್ಯಾಯ ದೊರೆಯಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಡಿ.ಬಿ.ಸುಜೇಂದ್ರ ಮಾತನಾಡಿ, ಈಗಾಗಲೇ ೪೫ ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿವೆ. ಅಷ್ಟೂ ಜನ ನ್ಯಾಯಾಲಯದ ಮೆಟ್ಟಿಲೇರದೆ ರಾಜಿ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ನೆಮ್ಮದಿಯಾಗಿ ನಿರ್ಗಮಿಸಿದ್ದಾರೆ. ಇದು ಎರಡೂ ಕಡೆಯ ಕಕ್ಷಿದಾರರ ಗೆಲುವೇ ಪರಿಸ್ಥಿತಿಯಾಗಿದ್ದು ಅವರೆಲ್ಲ ಸಂತಸಗೊಂಡಿದ್ದಾರೆ. ಇತ್ಯರ್ಥವಾದ ಪ್ರಕರಣಗಳಲ್ಲಿ ಪರಿಹಾರಕ್ಕೆ ಸಂಬಂಧಿಸಿದವುಗಳಿಗೆ ಹಣ ಶೀಘ್ರ ವಿಲೇವಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಭಾನುಮತಿ, ನ್ಯಾಯಾಧೀಶರುಗಳಾದ ಪ್ರಕಾಶ್, ಮಂಜುನಾಥ, ಕುಲಕರ್ಣಿ, ಗುರುಪ್ರಸಾದ್, ರಾಘವೇಂದ್ರ, ಸುಜಾತ, ದ್ಯಾವಪ್ಪ, ಲತಾ, ಅನುರಾಧ, ಶರತ್ ಕುಮಾರ್, ನಂದಿನಿ ಹಾಗೂ ವಕೀಲರು ಭಾಗವಹಿಸಿದ್ದರು.
Appeal to mediators to make special campaign a success
Leave a comment