ಕೊಪ್ಪ: ಅಕ್ರಮವಾಗಿ ಎರಡು ಹಸುಗಳನ್ನು ಹತ್ಯೆ ಮಾಡಿ ಮಾಂಸ ಮಾರಾಟ ಮಾಡಲು ತಯಾರಿ ನಡೆಸುತ್ತಿರುವ ವೇಳೆ ಹರಿಹರಪುರ ಪೊಲೀಸರು ದಾಳಿ ನಡೆಸಿ ಗೋವಿನ ಮಾಂಸ ಸಹಿತ ಆರೋಪಿಯನ್ನು ಬಂಧಿಸಿದ್ದಾರೆ.
ನಿಲುವಾಗಿಲು ಸಮೀಪದ ಕಾಳನಾಯಕನಕಟ್ಟೆ ಸಮೀಪ ನೂರುಲ್ಲಾ ಬಂಧಿತ ಆರೋಪಿ. ಸ್ವಂತ ಜಮೀನಿನಲ್ಲಿ ಮಲೆನಾಡು ಗಿಡ್ಡ ಹಸುಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಲು ಹ್ಯಾಕ್ ಮಾಡುತ್ತಿದ್ದಾಗ ಹರಿಹರಪುರ ಪೊಲೀಸರು ದಾಳಿ ನಡೆಸಿ 150 ಕೆ.ಜಿ.ಗೂ ಹೆಚ್ಚು ಗೋವಿನ ಮಾಂಸವನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ನೂರುಲ್ಲಾನನ್ನು ಕೊಪ್ಪ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಬುಧವಾರ ಸಂಜೆ ವೇಳೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯನ್ನು ಚಿಕ್ಕಮಗಳೂರು ಕಾರಾಗೃಹದಲ್ಲಿರಿಸಲಾಗಿದೆ.
ನೂರುಲ್ಲಾ ಪದೇ ಪದೆ ಇಂತಹ ಘಟನೆಯಲ್ಲಿ ಸಿಕ್ಕಿಬೀಳುತ್ತಿದ್ದಾನೆ. ಇತ್ತೀಚೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಅಕ್ರಮವಾಗಿ ಗೋವುಗಳು ಸಿಕ್ಕ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದ. ಗೋಕಳ್ಳತನ, ಸಾಗಣೆ ಸೇರಿದಂತೆ ಈತನ ಮೇಲೆ ನಾಲ್ಕು ಪ್ರಕರಣಗಳು ದಾಖಲಾಗಿವೆ ಘಟನೆಯ ವಿಷಯ ತಿಳಿಯುತ್ತಿದ್ದಂತೆ ಬಜರಂಗದಳ, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಘಟನಾ ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಆರೋಪಿಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಬರುತ್ತಿದ್ದಂತೆ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಹಿಂದು ಸಂಘಟನೆಯ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಇಂತಹ ಘಟನೆ ಘಟನೆ ಪದೇ ಪದೆ ನಡೆಯುತ್ತಿದ್ದರೂ ಪೊಲೀಸರು ಮೌನ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಳನಾಯಕನಕಟ್ಟೆ ಬಳಿ ಪದೇ ಪದೆ ಗೋಹತ್ಯೆ ಮಾಡಲಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ಸಮಾಜದ ವಾತಾವರಣ ಹದಗೆಡುತ್ತಿದೆ. ಆರೋಪಿಗೆ ಜೈಲಿಗೆ ಹೋಗಿ ಬರುವುದು ಅಭ್ಯಾಸವಾಗಿದೆ. ಇಲಾಖೆ ಆತನ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ಹೋರಾಟ ರೂಪಿಸಲಾಗುತ್ತದೆ ಎಂದು ಬಿಜೆಪಿ ಮುಖಂಡ ಎಸ್.ಎನ್.ರಾಮಸ್ವಾಮಿ ವಿಜಯವಾಣಿಗೆ ತಿಳಿಸಿದರು.
Accused of killing two cows arrested
Leave a comment