ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ ಮಾಡಿದರು.
ನಗರದ ಹಲವು ಬಡಾವಣೆಗಳಲ್ಲಿ ಗುರುವಾರದಿಂದಲೇ ಹಬ್ಬದ ವಾತಾವರಣ ಮನೆ ಮಾಡಿತ್ತು. ಟಿಪ್ಪುನಗರ, ಶಾಂತಿನಗರ, ಜ್ಯೋತಿ ಸರ್ಕಲ್, ಅಂಡೆಛತ್ರ, ಉಪ್ಪಳ್ಳಿ ಮತ್ತಿತರೆ ಬಡಾವಣೆಗಳ ಪ್ರಮುಖ ವೃತ್ತ ಮತ್ತು ಬೀದಿಯನ್ನು ಬಂಟಿಂಗ್ಸ್, ಬ್ಯಾನರ್, ಹೂವು, ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು. ಇಡೀ ಎಂ.ಜಿ.ರಸ್ತೆ ಹಸಿರು ಮಯವಾಗಿತ್ತು.
ಶುಕ್ರವಾರ ಸಂಜೆ ವೇಳೆಗೆ ಮಾರ್ಕೆಟ್ ರಸ್ತೆ, ಶಾಂತಿನಗರ, ಕೆಂಪನಹಳ್ಳಿ, ಉಪ್ಪಳ್ಳಿ ಮತ್ತಿತರೆ ಬಡಾವಣೆಗಳಿಂದ ತಂಡೋಪ ತಂಡವಾಗಿ ಬಂದ ಸಾವಿರಾರು ಜನ ಅಂಡೆಛತ್ರದ ಬಳಿ ಸಮಾವೇಶಗೊಂಡರು.
ಅಲ್ಲಿಂದ ಎಂ.ಜಿ.ರಸ್ತೆ, ಪ್ರಧಾನ ಅಂಚೆ ಕಚೇರಿ ರಸ್ತೆ ಮೂಲಕ ಐ.ಜಿ. ರಸ್ತೆ, ಎನ್ಎಂಸಿ ವೃತ್ತ, ಹನುಮಂತಪ್ಪ ವೃತ್ತದವರೆಗೂ ಮೆರವಣಿಗೆ ನಡೆಸಿದರು. ಬಿಳಿ ಬಣ್ಣದ ವಸ್ತ್ರ ಧರಿಸಿ ಕೈಯಲ್ಲಿ ಹಸಿರು ಧ್ವಜಗಳನ್ನು ಹಿಡಿದು ಮಾರ್ಗದ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಯುವಕರು ಡಿ.ಜೆ ಹಾಡಿಗೆ ಕುಣಿದು ಸಂಭ್ರಮಿಸಿದರು.
ಮೆಕ್ಕಾದ ಪ್ರಾರ್ಥನಾ ಮಂದಿರದ ಅಲಂಕೃತ ಮಾದರಿ ಬೃಹತ್ ಮೆರವಣಿಗೆಯನ್ನು ನಗರದ ಎಂಜಿ ರಸ್ತೆ, ಐಜಿ ರಸ್ತೆಯ ಇಕ್ಕೆಲಗಳು ಹಾಗೂ ಕಟ್ಟಡಗಳ ಅಂತಸ್ತಿನ ಮೇಲೆ ನಿಂತು ಮಹಿಳೆಯರು, ಮಕ್ಕಳು ಕಣ್ತುಂಬಿಕೊಂಡರು. ಕೆಲವರು ಮೆರವಣಿಗೆಯ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.
ಟಿಪ್ಪು ಸುಲ್ತಾನ್, ಸಮುದಾಯದ ಸಂಕೇತವಿದ್ದ ಬೃಹತ್ ಬಾವುಟಗಳನ್ನು ವೃತ್ತಾಕಾರದಲ್ಲಿ ತಿರುಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದಾರಿಯುದ್ದಕ್ಕೂ ಸಮುದಾಯದ ಹಿರಿಯರು ಮೆರವಣಿಗೆಯನ್ನು ವ್ಯವಸ್ಥಿತವಾಗಿ ಸಾಗಲು ಮಾರ್ಗದರ್ಶನ ನೀಡುತ್ತಿದ್ದರು.
ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಎಂ.ಜಿ. ರಸ್ತೆಯಲ್ಲಿ ವಾಹನ ಸಂಚಾರವನ್ನು ಬೆಳಿಗ್ಗೆಯಿಂದಲೇ ನಿರ್ಬಂಧಿಸಲಾಗಿತ್ತು. ಪೊಲೀಸರು ಎಲ್ಲೆಡೆ ಬ್ಯಾರಿಕೇಡ್ ಅಳವಡಿಸಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದರು. ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದರು. ಮಫ್ತಿಯಲ್ಲೂ ನೂರಾರು ಪೊಲೀಸರು ಕಾರ್ಯನಿರ್ವಹಿಸಿ ನಿಗಾ ಇರಿಸಿದ್ದರು.
A grand procession takes place in the city as part of Eid-Milad
Leave a comment