ಕಡೂರು: ಕರ್ನಾಟಕ ಜಾನಪದ ಅಕಾಡೆಮಿಯ 2026-27ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗೆ ಕಡೂರು ತಾಲ್ಲೂಕು ಬೀರೂರು ಹೋಬಳಿ ಬಿಸಿಲೆರೆ ಸಮೀಪದ ಅರೇಹಳ್ಳಿ ಗ್ರಾಮದ ಅಂಧ ಕಲಾವಿದ ಡಿ.ರಾಮಪ್ಪ ಆಯ್ಕೆಯಾಗಿದ್ದಾರೆ.
ಹುಟ್ಟಿನಿಂದಲೇ ಅಂಧರಾಗಿದ್ದರು ಇವರಲ್ಲಿ ಇದ್ದ ಆಸಕ್ತಿ ಮತ್ತು ಪ್ರತಿಭೆಯನ್ನು ಗುರುತಿಸಿ ಸಮೀಪದ ಬಿಸಿಲೆರೆಯ ದಾಸಯ್ಯ ಎನ್ನುವವರು ಇವರ ಗ್ರಾಮಕ್ಕೆ ಬಂದು ಭಜನೆ ಮತ್ತು ಶನಿ ಕಥೆ ಹೇಳುವುದನ್ನು ಕಲಿಸಿಕೊಟ್ಟರು. ಸುಮಾರು 50 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿದ ರಾಮಪ್ಪ ನಂತರ ಜಾನಪದ ಹಾಡುಗಳ ಗಾಯನ, ಸಂರಕ್ಷಣೆ, ನಾಟಕಗಳ ಅಭ್ಯಾಸ ಮಾಡಲು ಮುಂದಾಗಿ ಆಲಘಟ್ಟ ಸಮೀಪದ ನಾಗರಾಜಪ್ಪ ಎನ್ನುವ ಶಿಕ್ಷಕರಿಂದ ಮಾಯಾಬಜಾರ್ ಕುರುಕ್ಷೇತ್ರ ರಾಮಾಯಣ ಮೊದಲಾದ ನಾಟಕಗಳನ್ನು ಕೇಳಿ ಅಭ್ಯಸಿಸಿ ಅದನ್ನು ಹಲವಾರು ಕಡೆ ಪ್ರದರ್ಶಿಸಲು ಆಸಕ್ತ ಕಲಾ ವಿದರಿಗೆ ಹೇಳಿಕೊಟ್ಟಿದ್ದಾರೆ.
ಸುಮಾರು 25ಕ್ಕೂ ಹೆಚ್ಚು ಸಾಮಾಜಿಕ ನಾಟಕಗಳನ್ನು ಕೂಡ ಕಲಾವಿದರಿಗೆ ಹೇಳಿ ಕೊಟ್ಟಿರುವ ರಾಮಪ್ಪ, ಮುಖ್ಯವಾಗಿ ಕಣ್ಣಿಟ್ಟ ಹೆಣ್ಣು, ಜನ್ಮಕೊಟ್ಟ ತಾಯಿ, ಮುಡಿಗೇರಿದ ಮಿಡಿ ನಾಗರ, ಪ್ರಾಣ ಹೋದರೂ ಮಾನಬೇಕು, ಹಸಿರು ಬಳೆ, ಜಗಜ್ಯೋತಿ ಬಸವೇಶ್ವರ, ವಿರಾಟ ಪರ್ವ ಮೊದಲಾದ ನಾಟಕಗಳನ್ನು ಅಂತ ಸತ್ವದಿಂದಲೇ ಕಟ್ಟಿಕೊಟ್ಟಿದ್ದಾರೆ.
ಹಾರ್ಮೋನಿಯಂ, ಧೋಲಕ್, ತಬಲಾ ಕೂಡ ನುಡಿಸುವುದರಲ್ಲಿ ಚಾಪು ಮೂಡಿಸಿದ್ದಾರೆ. 61 ವರ್ಷ ವಯಸ್ಸಾಗಿದ್ದರು ಜನರು ಕರದಲ್ಲಿಗೆ ಹೋಗಿ ತಮ್ಮ ಸೇವೆ ಸಲ್ಲಿಸಿ ಬರುವ ಇವರಿಗೆ ಶಿವಮೊಗ್ಗ ಜಿಲ್ಲೆಯ ಸೂಗೂರು, ಚಾಮರಾಜನಗರ ಜಿಲ್ಲೆಯ ಸುತ್ತೂರು ಮಠಗಳು ಸೇರಿ ನಾಡಿನ ಹಲವೆಡೆ ಗೌರವಿಸಿವೆ.
Visually impaired artist D. Ramappa selected for the Janapada Academy’s annual honorary award.
Leave a comment