ಚಿಕ್ಕಮಗಳೂರು: ಕಾಫಿನಾಡಿನ ಹಲವೆಡೆ ಕಾಡಾನೆಗಳ ಸಂಚಾರ ತೀವ್ರಗೊಂಡಿದ್ದು, ಅರಣ್ಯ ಇಲಾಖೆ ಹಾಗೂ ಆನೆ ಕಾರ್ಯಪಡೆ (ETF) ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದೆ.
ಕಬ್ಬಿನಹಳ್ಳಿ ಸುತ್ತಮುತ್ತ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು, ಇದರಿಂದಾಗಿ ಉಳುವಗಿಲು, ಹುಕ್ಕುಂದ, ಕಡಬನಹಳ್ಳಿ, ಇಂದಾವರ, ತಳಿಹಳ್ಳಿ, ಜಾಕನಹಳ್ಳಿ, ಚಿಕ್ಕೋಳಲೆ ಹಾಗೂ ಹಿರಿಕೊಳಲೆ ಗ್ರಾಮಸ್ಥರು ತೀವ್ರ ಜಾಗರೂಕತೆಯಿಂದ ಇರಬೇಕೆಂದು ಸೂಚಿಸಲಾಗಿದೆ.
ವಿಶೇಷವಾಗಿ ಬೆಳಿಗ್ಗೆ ತೋಟಗಳಿಗೆ ಹೋಗುವ ರೈತರು ಮತ್ತು ಕಾರ್ಮಿಕರು ಹೆಚ್ಚಿನ ನಿಗಾ ವಹಿಸುವಂತೆ ಕೋರಲಾಗಿದೆ. ಮತ್ತೊಂದೆಡೆ, ಜಾಗರ್ ಖಾನ್ ಕಾಡಿನಿಂದ ಒಂಟಿ ಅನೆಯೊಂದು ಸಂಚರಿಸುತ್ತಿದ್ದು ಬಾರದಹಳ್ಳಿ, ಕಾರ್ಬೈಲು, ಚಂದ್ರಪುರ, ಕಮ್ಮರಗೋಡು, ದುಂಡುಗ, ಶುಭನಗರ ಹಾಗೂ ಕಸ್ಕೆಬೈಲ್ ಭಾಗದಲ್ಲಿ ಆತಂಕ ಸೃಷ್ಟಿಸಿದೆ.
ಅಲ್ಲದೆ, ದೊಡ್ಡಗಳ್ಳ ಎಸ್ಟೇಟ್ ಪಕ್ಕದ ಕಾಡಿನಲ್ಲಿ ಕಾಡಾನೆಗಳ ಗುಂಪು ಪತ್ತೆಯಾಗಿದ್ದು, ನಂದಿಬೆಟ್ಟ, ಆನೆ ಮಲ್ಲಪ್ಪ ಗುಡ್ಡ, ಹೊಸಪುರ, ಕಲ್ಲುಗುಡ್ಡ ಹಾಗೂ ಜಿ. ಹೊಸಹಳ್ಳಿ ಗ್ರಾಮಗಳ ಸುತ್ತಮುತ್ತಲೂ ತುರ್ತು ಎಚ್ಚರಿಕೆ ನೀಡಲಾಗಿದೆ.
ಬಾಳೆಹೊನ್ನೂರು ವಲಯದ ಅಂಡವಾನೆ, ಎಲೆಕಲ್, ಬಿಳುಕೊಪ್ಪ, ಕುಂಬ್ರುಮನೆ ಹಾಗೂ ಬನ್ನೂರು ಭಾಗದಲ್ಲೂ ಒಂಟಿ ಆನೆಯ ಸಂಚಾರವಿರುವ ಬಗ್ಗೆ ವರದಿಯಾಗಿದೆ. ಕಾಡಾನೆಗಳ ಓಡಾಟ ಹೆಚ್ಚಿರುವ ಹಿನ್ನೆಲೆಯಲ್ಲಿ ರಾತ್ರಿ ವೇಳೆ ತೋಟಗಳಿಗೆ ನೀರು ಹಾಯಿಸಲು ಹೋಗುವುದು ಅಥವಾ ವಿನಾಕಾರಣ ಓಡಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಕಾಫಿ ಬೆಳೆಗಾರರು ಹಾಗೂ ಕಾರ್ಮಿಕರು ಅರಣ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು. ಒಂದು ವೇಳೆ ಆನೆಗಳು ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣವೇ ಚಿಕ್ಕಮಗಳೂರು ಆನೆ ಕಾರ್ಯಪಡೆಯ ನಿಯಂತ್ರಣ ಕೊಠಡಿ ಸಂಖ್ಯೆ 7204004261 ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಅರಣ್ಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
Wild elephants moving in many parts of Coffee Country – Urgent warning to the public
Leave a comment