ಚಿಕ್ಕಮಗಳೂರು: ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ನಗರದ ಸುಭಾಶ್ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಿದ್ದ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಿನ ನಿತ್ಯದ ಬದುಕಿನ ಜಂಜಾಟದ ನಡುವೆ ನಿಮಗೆ ಕ್ರೀಡಾಕೂಟದ ದಿನ ಸಿಕ್ಕಿದೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಸರ್ಕಾರಿ ನೌಕರರಿಗೆ ಕಿವಿಮಾತು ಹೇಳಿದ ಅವರು, ಇಂದು ಎಲ್ಲರೂ ಒಂದಲ್ಲ ಒಂದು ರೀತಿ ಒತ್ತಡದಲ್ಲಿದ್ದಾರೆ, ಒತ್ತಡದ ನಡುವೆ ಕೆಲಸ ಮಾಡುವುದು ಕಷ್ಟ, ಹಾಗಾಗಿ ಒತ್ತಡದ ನಿವಾರಣೆಗೆ ಪ್ರತಿನಿತ್ಯ ವಾಕಿಂಗ್, ಯೋಗಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಕ್ರೀಡಾ ಕೂಟಗಳಲ್ಲಿ ಭಾಗವಹಿಸುವುದರಿಂದ ದೇಹ ಸದೃಢವಾಗುತ್ತದೆ, ಒತ್ತಡ ನಿವಾರಣೆಯಾಗುತ್ತದೆ ಎಂದು ತಿಳಿಸಿ, ಸರ್ಕಾರ ಹೊಸ ಪಿಂಚಣಿ ವ್ಯವಸ್ಥೆಯನ್ನು ಕೈ ಬಿಟ್ಟು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ (ಒಪಿಎಸ್) ಮುಂದುವರೆಸಬೇಕು, ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರಿಸುವುದರಿಂದ ಸರ್ಕಾರಿ ನೌಕರರ ನಿವೃತ್ತ ಜೀವನ ಸುಖಮಯವಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಮಾತನಾಡಿ ಸದಾ ಒತ್ತಡದ ನಡುವೆ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ಅತ್ಯಂತ ಅವಶ್ಯಕ. ಸರ್ಕಾರಿ ನೌಕರರು ದಿನನಿತ್ಯದ ಜಂಜಾಟವನ್ನು, ಒತ್ತಡವನ್ನು ಬದಿಗಿಟ್ಟು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು, ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು ಸೋಲಿಗೆ ಕುಗ್ಗಬಾರದು, ಗೆಲುವಿಗೆ ಹಿಗ್ಗಬಾರದು, ಎರಡನ್ನೂ ಸಮವಾಗಿ ಸ್ವೀಕರಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನ ಮಾತನಾಡಿ, ಕ್ರೀಡಾಕೂಟ ನಡೆಯುವ ಈ ಎರಡು ದಿನ ನಿಮ್ಮದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ಎಲ್ಲವನ್ನೂ ಮರೆತು ಕ್ರೀಡೆಗಳಲ್ಲಿ ಪಾಲ್ಗೊಳ್ಳಿ ಎಂದು ಸರ್ಕಾರಿ ನೌಕರರಿಗೆ ಸಲಹೆ ಮಾಡಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ಸಂಘದಿಂದ ನಗರದಲ್ಲಿ ನಿರ್ಮಿಸುತ್ತಿರುವ ಸರ್ಕಾರಿ ನೌಕರರ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ವೇದಿಕೆಯಲ್ಲಿದ್ದ ಶಾಸಕ ಎಚ್.ಡಿ.ತಮ್ಮಯ್ಯ, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರಿಗೆ ಮನವಿ ಮಾಡಿದರು. ಸಮುದಾಯ ಭವನದ ನಿರ್ಮಾಣಕ್ಕೆ ಸರ್ಕಾರಿ ನೌಕರರು ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ಕೋರಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಚ್.ಡಿ. ತಮ್ಮಯ್ಯ ಮನುಷ್ಯನಿಗೆ ಆರೋಗ್ಯವೇ ದೊಡ್ಡ ಭಾಗ್ಯ, ಅದು ಲಭಿಸಬೇಕಾದರೆ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದರು. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ (ಒಪಿಎಸ್) ಮುಂದುವರೆಸುವಂತೆ ಮುಖ್ಯಮಂತ್ರಿಗಳಿಗೆ ತಾವು ಒತ್ತಾಯಿಸಿರುವುದಾಗಿ ಹೇಳಿದ ಅವರು ಮತ್ತೆ ವಿಧಾನಸೌಧದಲ್ಲೂ ಆ ಕುರಿತು ಮಾತನಾಡುವುದಾಗಿ ಭರವಸೆ ನೀಡಿದರು. ಮುಂದಿನ ವರ್ಷದ ಕ್ರೀಡಾ ಕೂಟಕ್ಕೆ ಸರ್ಕಾರಿ ನೌಕರರಿಗೆ ಟ್ರ್ಯಾಕ್ಸೂಟ್ಗಳನ್ನು ನೀಡುವುದಾಗಿ ಹೇಳಿದ ಅವರು ನೌಕರರ ಸಮುದಾಯ ಭವನದ ನಿರ್ಮಾಣಕ್ಕೆ ತಾವು ಈಗಾಗಲೇ ೧೦ ಲಕ್ಷ ರೂ ಒದಗಿಸಿದ್ದು, ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತ ನಾಯಕ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಡಾ.ಎಚ್.ಪಿ.ಮಂಜುಳ, ಜಿಲ್ಲಾ ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ಎಸ್.ಮಂಜುನಾಥ ಸ್ವಾಮಿ, ಖಜಾಂಚಿ ಪೂರ್ಣೇಶ್, ರಾಜ್ಯ ಪರಿಷತ್ ಸದಸ್ಯ ಮಂಜುನಾಥ್, ಕಾರ್ಯದರ್ಶಿ ಟಿ.ಪದ್ಮರಾಜ್. ಕಾರ್ಯಾಧ್ಯಕ್ಷ ಬಿ.ಎನ್.ಸುಂದರೇಶ್, ಹಿರಿಯ ಉಪಾಧ್ಯಕ್ಷರಾದ ಕೆ.ಬಿ.ಶೇಖರ್, ಸುದೀಪ್ ರಾಜೇಂದ್ರ, ಅನಂತ್, ಪುಟ್ಟಸ್ವಾಮಿ, ಮಂಜುನಾಥ್, ನಾಗೇಶ್ ಉಪಸ್ಥಿತರಿದ್ದರು.
Sports are helpful for mental and physical health.
Leave a comment