ಚಿಕ್ಕಮಗಳೂರು: ಅಸಮಾನತೆ, ಅಸ್ಪೃಶ್ಯತೆ, ಜಾತೀಯತೆ ದೂರವಾಗಿ ಸ್ವಾಸ್ಥ್ಯ ಸಮಾಜದ ನಿರ್ಮಾಣವಾಗಬೇಕಾದರೆ ನಮ್ಮ ಚಿಂತನೆಗಳು ಬದಲಾಗಬೇಕು, ಬಸವಾದಿ ಶರಣರ ಚಿಂತನೆಗಳು, ವಿಚಾರಧಾರೆಗಳು, ಆದರ್ಶಗಳು ನಮ್ಮದಾಗಬೇಕು ಎಂದು ಪುಷ್ಪಗಿರಿ ಮಹಾಸಂಸ್ಥಾನ ಮಠದ ಶ್ರೀ ಡಾ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಎಐಟಿ ವೃತ್ತದ ಬಳಿ ಇರುವ ಒಕ್ಕಲಿಗರ ಭವನದಲ್ಲಿ ಮಂಗಳವಾರ ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ೪೦ರ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಸ್ವಾತಂತ್ರ ಪೂರ್ವದಲ್ಲಿ ದೇಶದಲ್ಲಿ ಶೇ ೯೦ರಷ್ಟು ಅನಕ್ಷರಸ್ಥರಿದ್ದರು, ಇಂದು ಶೇ ೯೦ರಷ್ಟು ವಿದ್ಯಾವಂತರಿದ್ದಾರೆ, ಅಂದು ದೇಶದಲ್ಲಿ ನ್ಯಾಯಾಲಯಗಳ ಸಂಖ್ಯೆ, ಜಗಳ, ಕದನ, ಕೊಲೆ, ಅಪರಾಧಗಳು ಕಡಿಮೆ ಇದ್ದವು, ಆದರೆ ಇಂದು ಅವುಗಳ ಸಂಖ್ಯೆ ಹೆಚ್ಚಿದೆ ಎಂದು ವಿಷಾದಿಸಿದರು.
ಬಹಳಷ್ಟು ವರ್ಷಗಳ ಹಿಂದೆ ಯಾವುದೇ ಮೂಲಭೂತ ಸೌಕರ್ಯಗಳು ಇರಲಿಲ್ಲ ಹೊಟ್ಟೆಗೆ, ಬಟ್ಟೆಗೆ, ಕಷ್ಟಪಡುವ ಅಂದಿನ ಕಾಲದಲ್ಲಿ ನಮ್ಮ ಹಿರಿಯರು ಸುಖ, ಸಂತೋಷ, ನೆಮ್ಮದಿಯಿಂದ ಬಾಳುತ್ತಿದ್ದರು, ಇಂದು ನಮಗೆ ಎಲ್ಲವೂ ಇದೆ ಆದರೆ ಸುಖ, ಶಾಂತಿ, ನೆಮ್ಮದಿ ಇಲ್ಲ, ನಾವು ಜಾತಿ, ಮತ, ಧರ್ಮಗಳ ಸಂಕೋಲೆಯಲ್ಲಿದ್ದೇವೆ ಎಂದ ಅವರು ಇದಕ್ಕೆ ಮೂಲ ಕಾರಣ ನಾವು ಬಸವಾದಿ ಶರಣರ ತತ್ವಗಳನ್ನು, ವಿಚಾರಧಾರೆಗಳನ್ನು, ಆದರ್ಶಗಳನ್ನು ಕೈ ಬಿಟ್ಟಿರುವುದು ಎಂದರು.
ಬಸವಾದಿ ಶರಣರ ತತ್ವ, ಸಿದ್ಧಾಂತಗಳನ್ನು, ವಿಚಾರಧಾರೆಗಳನ್ನು, ಅವರ ಆದರ್ಶಗಳನ್ನು ನಾವು ನಿಜವಾಗಿಯೂ ಮೈಗೂಡಿಸಿಕೊಂಡರೆ ಸುಂದರ ಸಮಾಜ, ಜಗತ್ತು ನಿರ್ಮಾಣವಾಗುತ್ತದೆ ಎಂದ ಶ್ರೀಗಳು ಈ ಹಿನ್ನೆಲೆಯಲ್ಲಿ ಬಸವಾದಿ ಶರಣರ ತತ್ವಗಳನ್ನು, ಚಿಂತನೆಗಳನ್ನು, ಹಳ್ಳಿ ಹಳ್ಳಿಗಳಲ್ಲೂ, ಮನೆ ಮನೆಗಳಲ್ಲೂ ಬಿತ್ತ ಬೇಕು, ಬಸವಾದಿ ಶರಣರ ಚಿಂತನೆ, ತತ್ವ, ಆದರ್ಶ, ವಿಚಾರಧಾರೆಗಳನ್ನು ಉಳಿಸಿ ಬೆಳೆಸುವ ಸಂಕಲ್ಪವನ್ನು, ಪ್ರತಿಜ್ಞೆಯನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ ಸಿ. ಸೋಮಶೇಖರ್ ಮಾತನಾಡಿ ಶರಣ ಸಾಹಿತ್ಯ ಪರಿಷತ್ತಿನ ೪೦ರ ಸಂಭ್ರಮ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸುವ ಮೂಲಕ ರವೀಶ್ ಕ್ಯಾತನಬೀ ಡು ಅವರು ಅತ್ಯಂತ ಪುಣ್ಯದ ಕಾರ್ಯ ಮಾಡಿದ್ದಾರೆ ಎಂದು ಶ್ಲಾಘಿಸಿದರು. ಶರಣ ಸಾಹಿತ್ಯ ಪರಿಷತ್ ಕಳೆದ ೪೦ ವರ್ಷಗಳಲ್ಲಿ ಉಳಿದು, ಬೆಳೆದು ಬಂದ ದಾರಿಯನ್ನು, ಅದಕ್ಕಾಗಿ ದುಡಿದವರನ್ನು, ಪರಿಷತ್ತಿನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.
ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ರವೀಶ್ ಕ್ಯಾತನಬೀಡು ಮಾತನಾಡಿ ಮಾನವೀಯ ಮೌಲ್ಯಗಳು, ಪ್ರೀತಿ, ಪ್ರೇಮ, ಸಂಬಂಧಗಳು ಕಳೆದು ಹೋಗಿರುವ ಇಂದಿನ ಪರಿಸ್ಥಿತಿಯಲ್ಲಿ ದಯವಿಲ್ಲದ ಧರ್ಮ ಅದಾವುದಯ್ಯ ಎಂದು ಪ್ರಶ್ನಿಸುವ ನಿಟ್ಟಿನಲ್ಲಿ ಈ ೪೦ರ ಸಂಭ್ರಮ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆಶಯ ನುಡಿಗಳನ್ನಾಡಿದ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ. ಮಂಜುನಾಥ ಸ್ವಾಮಿ ಆರೋಗ್ಯ ಮತ್ತು ಆಯಸ್ಸು ಎರಡೂ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಉತ್ಕೃಷ್ಟ ಚಿಂತನೆಯೊಂದಿಗೆ ಉತ್ತಮ ಜೀವನವನ್ನು ಕಟ್ಟಿಕೊಂಡು ಹದವಾದ ಬದುಕನ್ನು ದಕ್ಕಿಸಿಕೊಳ್ಳುವ ಬಗೆಯನ್ನು ಕಂಡುಕೊಳ್ಳಬೇಕಾಗಿದೆ. ಇಂತಹ ಮನುಷ್ಯತ್ವ ಮಾನವೀಯತೆ ಉದಾತ್ತ ಜೀವನಕ್ಕೆ ವಚನಗಳೊಳಗೆ ಅರಿವಿನ ಮಾರ್ಗವಿದೆ. ಆ ಮಾರ್ಗದಲ್ಲಿ ಎಲ್ಲರೂ ಎಲ್ಲರನ್ನೂ ಮುಖಾಮುಖಿಯಾಗುತ್ತಾ ಸ್ವ ವಿಮರ್ಶೆಯೊಂದಿಗೆ ವೈಚಾರಿಕ ನಾಡನ್ನು ಕಟ್ಟಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಷಡಕ್ಷರಿ ಸ್ವಾಮಿ ಬಸವಾದಿ ಶರಣರ ಚಿಂತನೆ, ವಚನ, ವಿಚಾರಧಾರೆಗಳನ್ನು ಕೈಬಿಟ್ಟ ಪರಿಣಾಮ ಸಮಾಜದಲ್ಲಿಂದು ಅಶಾಂತಿ, ಜಾತೀಯತೆ, ಅಸಮಾನತೆ ತಾಂಡವವಾಡುತ್ತಿವೆ, ಅವುಗಳ ನಿವಾರಣೆಗಾಗಿ ಮತ್ತೆ ಎಲ್ಲರೂ ವಚನಗಳತ್ತ ಹೊರಳಬೇಕಾಗಿದೆ ಎಂದರು.
ಶರಣ ಸಾಹಿತ್ಯ ಪರಿಷತ್ತಿನ ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ಹಾಲಿ ಮತ್ತು ಮಾಜಿ ಜಿಲ್ಲಾಧ್ಯಕ್ಷರು, ಕದಳಿ ಮಹಿಳಾ ವೇದಿಕೆ ಅಧ್ಯಕ್ಷರುಗಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು, ಕಾರ್ಯಕ್ರಮಕ್ಕೆ ಮುನ್ನ ಸವಿತಾ ಅಮರೇಶ್ ನುಡುಗೋಣಿ ಅವರಿಂದ ವಚನ ಗಾಯನ ಮತ್ತು ಹಿಂದುಸ್ತಾನಿ ಸಂಗೀತ ನಡೆಯಿತು, ಸಮಾರಂಭದ ನಂತರ ವಚನ ಯೋಗ ನೃತ್ಯ ರೂಪಕ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಶ್ರೀಶೈಲ ಪಟ್ಟಣಶೆಟ್ಟಿ, ಅಭಿನಯ ಪಶುಕುಮಾರ್, ಎಂ.ಆರ್. ಗಂಗಾಧರ್ ಶಿವಮೂರ್ತಿ ಉಪಸ್ಥಿತರಿದ್ದರು.
To build a healthy society our thinking must change.
Leave a comment