ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮದುವೆ ಮನೆಯೊಂದಕ್ಕೆ ನುಗ್ಗಿದ ಮಂಗಳಮುಖಿಯರು ಹಣಕ್ಕಾಗಿ ರಂಪಾಟ ನಡೆಸಿ, ಮದುವೆಯ ಸಂಭ್ರಮವನ್ನೇ ಕೆಡಿಸಿರುವ ಘಟನೆ ನಡೆದಿದೆ. ಕೇವಲ ಹಣಕ್ಕಾಗಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ ಮಂಗಳಮುಖಿಯರ ನಡೆಗೆ ಮದುವೆಗೆ ಬಂದಿದ್ದ ಅತಿಥಿಗಳು ಹಾಗೂ ವಧು-ವರರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ನಗರದ ಪ್ರಸಿದ್ಧ ರಂಗಣ್ಣನ ಛತ್ರದಲ್ಲಿ ಇಂದು ವಿಜೃಂಭಣೆಯಿಂದ ಮದುವೆ ಸಮಾರಂಭ ನಡೆಯುತ್ತಿತ್ತು. ಹಸೆಮಣೆ ಏರಿದ್ದ ವಧು-ವರರಿಗೆ ಅತಿಥಿಗಳು ಶುಭ ಹಾರೈಸುತ್ತಿದ್ದ ವೇಳೆ ಇಬ್ಬರು ಮಂಗಳಮುಖಿಯರು ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸಂಪ್ರದಾಯದಂತೆ ಮದುವೆ ಮನೆಯವರು ಅವರಿಗೆ 500 ರೂಪಾಯಿ ಹಣ ನೀಡಲು ಮುಂದಾಗಿದ್ದಾರೆ. ಆದರೆ, 500 ರೂಪಾಯಿ ಪಡೆಯಲು ನಿರಾಕರಿಸಿದ ಮಂಗಳಮುಖಿಯರು, ಬರೋಬ್ಬರಿ 10,000 ರೂಪಾಯಿ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಮದುವೆ ಮನೆಯವರು ಅಷ್ಟು ದೊಡ್ಡ ಮೊತ್ತ ನೀಡಲು ನಿರಾಕರಿಸಿದಾಗ, ಮಂಗಳಮುಖಿಯರು ಮಂಟಪದ ಮೇಲೆಯೇ ರಂಪಾಟ ಆರಂಭಿಸಿದ್ದಾರೆ. ವಧು-ವರರ ಮುಂದೆಯೇ ಅಸಭ್ಯವಾಗಿ ವರ್ತಿಸಿ, ಜೋರಾಗಿ ಕಿರುಚಾಡಿದ್ದಾರೆ. ‘ನಿಮಗೆ ಹಣ ಕೊಡೋ ಯೋಗ್ಯತೆ ಇಲ್ವಾ?’ ಎಂದು ಮನೆಯವರನ್ನು ಏಕವಚನದಲ್ಲೇ ನಿಂದಿಸಿದ್ದಾರೆ. ಮಂಗಳಮುಖಿಯರ ಈ ಹಠಾತ್ ವರ್ತನೆಯಿಂದ ಮದುವೆಗೆ ಬಂದಿದ್ದ ಹೆಣ್ಣುಮಕ್ಕಳು ಹಾಗೂ ಹಿರಿಯರು ಮುಜುಗರಕ್ಕೊಳಗಾದರು.
ಮಂಗಳಮುಖಿಯರ ಈ ಅಸಭ್ಯ ವರ್ತನೆಯನ್ನು ಕಂಡು ಅಲ್ಲಿದ್ದ ಕೆಲವರು ಪ್ರಶ್ನೆ ಮಾಡಲು ಮುಂದಾದಾಗ, ಅವರ ವಿರುದ್ಧವೂ ಕಿಡಿಕಾರಿದ್ದಾರೆ. ‘ದಮ್ಮಿದ್ದರೆ ಹೊರಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇವೆ’ ಎಂದು ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮದುವೆ ಮಂಟಪದಲ್ಲಿ ಗದ್ದಲ ಸೃಷ್ಟಿಸಿದ್ದರಿಂದ, ಮಂಗಳವಾದ್ಯದ ಸದ್ದಿಗಿಂತ ಮಂಗಳಮುಖಿಯರ ಕಿರುಚಾಟವೇ ಹೆಚ್ಚಾಗಿತ್ತು. ಇದರಿಂದಾಗಿ ಸಂಭ್ರಮದಿಂದ ನಡೆಯಬೇಕಿದ್ದ ಮದುವೆ ಕಾರ್ಯಕ್ರಮ ಕೆಲಕಾಲ ಸ್ಥಗಿತಗೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮದುವೆ ಅಥವಾ ಶುಭ ಸಮಾರಂಭಗಳಲ್ಲಿ ಮಂಗಳಮುಖಿಯರು ಬಂದು ಹರಸುವುದು ವಾಡಿಕೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ಈ ರೀತಿ ದಬ್ಬಾಳಿಕೆ ನಡೆಸುವುದು ಮತ್ತು ಸಾರ್ವಜನಿಕವಾಗಿ ಅವಮಾನ ಮಾಡುವುದು ಹೆಚ್ಚಾಗುತ್ತಿದೆ. ಚಿಕ್ಕಮಗಳೂರಿನ ಈ ಘಟನೆಯ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರು ಇಂತಹ ಕಿರುಕುಳದ ವಿರುದ್ಧ ಪೊಲೀಸ್ ಕ್ರಮಕ್ಕೆ ಒತ್ತಾಯಿಸಿದ.
Margalmukhi gang fights in wedding house for money
Leave a comment