ಚಿಕ್ಕಮಗಳೂರು: ‘ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ಸಿಗರು ನುಂಗಣ್ಣರು’ ಎಂದು ಬಿಜೆಪಿ ನೀಡಿರುವ ಜಾಹೀರಾತು ಮತ್ತು ಟೀಕೆಗಳ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಚಿಕ್ಕಮಗಳೂರಿನಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಹಾತ್ಮ ಗಾಂಧೀಜಿಯವರ ಬಗ್ಗೆ ಬಿಜೆಪಿಯವರಿಗೆ ನಿಜವಾಗಿಯೂ ಯಾವ ರೀತಿಯ ಗೌರವ ಭಾವನೆ ಇದೆ ಎಂಬುದು ಜಗತ್ತಿಗೇ ತಿಳಿದಿರುವ ವಿಷಯವಾಗಿದ್ದು, ಈಗ ಅವರು ಹೊಸದಾಗಿ ಗಾಂಧೀಜಿಯವರ ಬಗ್ಗೆ ಮಾತನಾಡಲು ಹೊರಟಿರುವುದು ಹಾಸ್ಯಾಸ್ಪದ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯವರಿಗೆ ಗಾಂಧೀಜಿಯವರ ಮೇಲೆ ಅಷ್ಟು ಗೌರವವಿದ್ದರೆ, ವಿಶ್ವದಲ್ಲೇ ಅತಿ ದೊಡ್ಡ ಉದ್ಯೋಗ ನೀಡುವ ಯೋಜನೆಯೆಂದು ವಿಶ್ವಬ್ಯಾಂಕ್ ಮತ್ತು ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಪ್ರಶಂಸೆಗೊಳಗಾದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆಯಿಂದ ಗಾಂಧೀಜಿಯವರ ಹೆಸರನ್ನು ತೆಗೆಯಲು ಏಕೆ ಮುಂದಾದರು ಎಂದು ಸಚಿವರು ಪ್ರಶ್ನಿಸಿದ್ದಾರೆ.
ಈ ಯೋಜನೆಯ ಹೆಸರನ್ನು ಬದಲಿಸಲು ಯಾವುದೇ ಗಂಭೀರ ಕಾರಣವಾಗಲಿ ಅಥವಾ ಯಾರಾದರೂ ಹೋರಾಟವನ್ನಾಗಲಿ ಮಾಡಿರಲಿಲ್ಲ. ಕೇವಲ ಕಾಂಗ್ರೆಸ್ ಎಂಬ ಹೆಸರು ಗಾಂಧಿಯವರ ಜೊತೆ ಅವಿನಾಭಾವವಾಗಿ ಜೋಡಣೆಯಾಗಿದೆ ಎಂಬ ಒಂದೇ ಕಾರಣಕ್ಕೆ ಬಿಜೆಪಿ ಈ ರೀತಿ ಮಾಡಿದೆ ಎಂದು ಅವರು ಆರೋಪಿಸಿದರು.
ನರೇಗಾ ಯೋಜನೆಯ ಯಶಸ್ಸು ಮತ್ತು ಅಂತಾರಾಷ್ಟ್ರೀಯ ಮಟ್ಟದ ಮನ್ನಣೆಯನ್ನು ತಡೆಯಲು ಸಾಧ್ಯವಾಗದ ಬಿಜೆಪಿಯವರು, ರಾಜಕೀಯ ದ್ವೇಷಕ್ಕಾಗಿ ಇಂತಹ ಹತಾಶೆಯ ಮಾತುಗಳನ್ನಾಡುತ್ತಿದ್ದಾರೆ. ಗಾಂಧೀಜಿಯವರ ವಿಚಾರಧಾರೆಗಳನ್ನು ಒಪ್ಪದವರು ಇಂದು ಅವರ ಹೆಸರನ್ನೇ ಬಳಸಿಕೊಂಡು ಕಾಂಗ್ರೆಸ್ ಅನ್ನು ಟೀಕಿಸಲು ಹೊರಟಿರುವುದು ಅವರ ಇಬ್ಬಂದಿ ನೀತಿಯನ್ನು ತೋರಿಸುತ್ತದೆ ಎಂದು ಪರಮೇಶ್ವರ್ ಅವರು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಗಳು ಮತ್ತೆ ಕಾವೇರುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಹಾಗೂ ಅದಕ್ಕೆ ಹೈಕಮಾಂಡ್ನಿಂದ ಹಸಿರು ನಿಶಾನೆ ಸಿಕ್ಕಿದೆ ಎಂಬ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಸಚಿವರು ಮುಕ್ತವಾಗಿ ಸ್ವಾಗತಿಸಿದ್ದಾರೆ.
ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದರೆ ಅದು ಅತ್ಯಂತ ಸಂತೋಷದ ವಿಷಯ. ರಾಜ್ಯಕ್ಕೆ ಸದ್ಯ ಒಂದು ಸ್ಥಿರವಾದ ಆಡಳಿತ ನೀಡುತ್ತಿರುವ ಸರ್ಕಾರದ ಅವಶ್ಯಕತೆಯಿದ್ದು, ಸಿದ್ದರಾಮಯ್ಯನವರು ಅಂತಹ ಅಡಳಿತವನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಹೀಗಿರುವಾಗ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ” ಎಂದು ಅವರು ತಿಳಿಸಿದರು.
ನಾಯಕತ್ವದ ಬಗ್ಗೆ ಕಾರ್ಯಕರ್ತರ ಆಶಯಗಳ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಥವಾ ನನಗೆ ಅವರವರದ್ದೇ ಆದ ಬೆಂಬಲಿಗರು ಮತ್ತು ಕಾರ್ಯಕರ್ತರಿದ್ದಾರೆ. ಪ್ರತಿಯೊಬ್ಬ ಕಾರ್ಯಕರ್ತ ತನ್ನ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗಬೇಕು ಎಂದು ಬಯಸುವುದು ಪ್ರಜಾಪ್ರಭುತ್ವದಲ್ಲಿ ಸಹಜ. ಆದರೆ, ಕೇವಲ ಕಾರ್ಯಕರ್ತರು ಹೇಳಿದ ತಕ್ಷಣ ಯಾವುದೇ ಬದಲಾವಣೆಗಳು ಸಂಭವಿಸುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಹೈಕಮಾಂಡ್ ಎಂಬ ವ್ಯವಸ್ಥೆಯಿದೆ.
ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವುದರಲ್ಲಿ ತಪ್ಪೇನಿದೆ? ಹೈಕಮಾಂಡ್ ಒಪ್ಪಿಗೆ ನೀಡಿದ ಮೇಲೆ ಆ ವಿಷಯ ಅಲ್ಲಿಗೆ ಮುಗಿಯಿತು ಎಂದು ಅವರು ಸ್ಪಷ್ಟಪಡಿಸಿದರು. ಅಧಿಕಾರ ಹಂಚಿಕೆ ಅಥವಾ ‘ಪವರ್ ಶೇರಿಂಗ್ ಬಗ್ಗೆ ಏನೇ ಚರ್ಚೆಗಳು ನಡೆಯುತ್ತಿದ್ದರೂ, ಅಂತಿಮವಾಗಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಈ ನಾಯಕತ್ವದ ಗೊಂದಲಗಳು ಸರ್ಕಾರದ ಆಡಳಿತದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ರಾಜ್ಯದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂ (ಇಗಿಒ) ಬದಲಿಗೆ ಹಳೆಯ ಬ್ಯಾಲೆಟ್ ಪೇಪರ್ ಪದ್ಧತಿಯನ್ನು ಮರುಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ.
ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತ್ರತ ಚರ್ಚೆ ನಡೆಸಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ಬ್ಯಾಲೆಟ್ ಪೇಪರ್ ಪರಿಚಯಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದರು. ಈ ಚುನಾವಣಾ ಸುಧಾರಣೆಯು ಪ್ರಜಾಪ್ರಭುತ್ವದ ಅಡಿಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಗ್ರಾಮ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಮೂಲಕವೇ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬಹುಶಃ ಜಿಬಿಎ ಚುನಾವಣೆಗಳಿಗೂ ಇದೇ ವ್ಯವಸ್ಥೆಯನ್ನು ಅನ್ವಯಿಸುವ ಸಾಧ್ಯತೆಯಿದೆ ಎಂದು ಸಚಿವರು ವಿವರಿಸಿದರು.
ಕಳೆದ ಕೆಲವು ಕಾಲದಿಂದ ಇವಿಎಂ ಬಳಕೆಯ ಬಗ್ಗೆ ವ್ಯಕ್ತವಾಗುತ್ತಿದ್ದ ಭಿನ್ನಾಭಿಪ್ರಾಯಗಳ ನಡುವೆ ಸರ್ಕಾರದ ಈ ಹೊಸ ನಿರ್ಧಾರವು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
It is ridiculous that BJP is starting to talk about Gandhiji again.
Leave a comment