ಬೆಂಗಳೂರು: ರಸ್ತೆ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಿಗೆ, ಯಾವುದೇ ಮುಂಗಡ ಹಣ ಕೇಳದೆ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಇಲಾಖೆ ಜಿಲ್ಲಾ ಆಸ್ಪತ್ರೆಗಳಿಗೆ ಆದೇಶಿಸಿದೆ.
ಸುಟ್ಟ ಗಾಯ, ವಿಷಪ್ರಾಶನ, ಹಲ್ಲೆಯಿಂದಾದ ಗಾಯ ಸೇರಿ ಇತರೆ ತುರ್ತು ಸಂದರ್ಭದಲ್ಲಿಯೂ ವೈದ್ಯಕೀಯ ಸಂಸ್ಥೆ ಅಥವಾ ವೈದ್ಯರು ಮುಂಗಡ ಹಣ ಪಾವತಿಗೆ ಬೇಡಿಕೆ ಇಡದೆ, ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನೀಡಬೇಕು. ಇದನ್ನು ಉಲ್ಲಂಘಿಸಿದಲ್ಲಿ ₹ 1 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಸುಧಾರಿಸಲು ಪ್ರತಿಯೊಂದು ಆಸ್ಪತ್ರೆಯೂ ತಕ್ಷಣದ ವೈದ್ಯಕೀಯ ತಪಾಸಣೆ ಸೇವೆ ಮತ್ತು ಪ್ರಾಥಮಿಕ ಚಿಕಿತ್ಸೆಯನ್ನು ಉಚಿತವಾಗಿ ಹಾಗೂ ಅಗತ್ಯವೆಂದು ಪರಿಗಣಿಸಿ ಒದಗಿಸಬೇಕು. ಸೌಲಭ್ಯಗಳ ಕೊರತೆಯಿರುವ ಆಸ್ಪತ್ರೆಗಳು, ರೋಗಿಯನ್ನು ಇತರ ಆಸ್ಪತ್ರೆ ಗಳಿಗೆ ವರ್ಗಾವಣೆ ಮಾಡುವ ಮೊದಲು ಪ್ರಥಮ ಚಿಕಿತ್ಸೆ ನೀಡಬೇಕು. ವೈದ್ಯಕೀಯ ವಿವರಗಳೊಂದಿಗೆ ಸ್ಥಳಾಂತರಿಸಬೇಕು ಎಂದು ಹೇಳಿದೆ.
ರಸ್ತೆ ಅಪಘಾತದ ಸಂತ್ರಸ್ತರು, ಅಪಘಾತದ ದಿನಾಂಕದಿಂದ ಏಳು ದಿನಗಳವರೆಗೆ ₹ 1.50 ಲಕ್ಷದವರೆಗೆ ಯಾವುದೇ ಗೊತ್ತುಪಡಿಸಿದ ಆಸ್ಪತ್ರೆ ಯಲ್ಲಿ ನಗದು ರಹಿತ ಚಿಕಿತ್ಸೆಗೆ ಅರ್ಹರಾಗಿರುತ್ತಾರೆ. ರಾಜ್ಯ ರಸ್ತೆ ಸುರಕ್ಷತಾ ಮಂಡಳಿಯು ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿದ್ದು, ಮೋಟಾರು ವಾಹನ ಅಪಘಾತ ನಿಧಿಯಿಂದ ಮರುಪಾವತಿ ಮಾಡಲಾಗುತ್ತದೆ ಎಂದು ತಿಳಿಸಿದೆ.
Fine of up to Rs 1 lakh for refusing treatment to an injured person
Leave a comment