ಚಿಕ್ಕಮಗಳೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುವ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗ ನೀಡಿರುವ ವರದಿಗೆ ಸ್ಪಂದಿಸಿರುವ ಸರ್ಕಾರ ಒಳ ಮೀಸಲಾತಿ ಘೋಷಿಸಿರುವುದನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಲ್.ಎನ್ ಶ್ರೀಕಾಂತ್ ಸ್ವಾತಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆಯೋಗದ ವರದಿ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಮಗ್ರವಾಗಿದ್ದು, ನ್ಯಾಯಬದ್ಧವಾಗಿದೆ. ಸಂವಿಧಾನ ಬದ್ಧವಾಗಿ ವೈಜ್ಞಾನಿಕವಾಗಿದೆ. ಈ ಮೂಲಕ ಸರ್ಕಾರ ಒಳಮೀಸಲಾತಿ ಘೋಷಿಸಿರುವುದು ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳಿಗೂ ಸಾಮಾಜಿಕ ಪರಿಕಲ್ಪನೆಯಡಿ ನ್ಯಾಯ ಒದಗಿಸಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಅವಕಾಶ ವಂಚಿತ ಸಮುದಾಯಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸಿಕೊಡುವ ಮೂಲಕ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸಬಲೀಕರಣಗೊಳಿಸುವ ಪರಿಣಾಮಕಾರಿ ಯೋಜನೆ ಇದಾಗಿದೆ ಎಂದರು.
ಪರಿಶಿಷ್ಟ ಜಾತಿ ಸಮುದಾಯಗಳು ಮತ್ತು ದಸಂಸ ಕಳೆದ ೩೫ ವರ್ಷಗಳ ಈ ಬೇಡಿಕೆಯನ್ನು ಮುಂದಿಟ್ಟು ಹೋರಾಟ ನಡೆಸಿದ ಪರಿಣಾಮ ಇಂದು ಗೆಲುವು ಸಾಧಿಸಲು ಪೂರಕವಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿಗಳನ್ನು ಮೂರು ವಿಭಾಗಗಳನ್ನಾಗಿ ವರ್ಗೀಕರಿಸಿ ಶೇ.೧೭ ರಷ್ಟು ಎಸ್‌ಸಿ ಮೀಸಲು ಪ್ರಮಾಣವನ್ನು ಎಡಗೈ ಮಾದಿಗ ಶೇ.೬. ಬಲಗೈ ಛಲವಾದಿ ಶೇ.೬, ಹಾಗೂ ಭೋವಿ, ಲಂಬಾಣಿ, ಕೊರಚ, ಕೊರಮ ಇತರೆ ಜಾತಿಗಳಿಗೆ ಶೇ.೫ ಒಳಮೀಸಲಾತಿ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.
ಇಂತಹ ಐತಿಹಾಸಿಕ ನಿರ್ಣಯ ಕೈಗೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಎಲ್ಲ ಸಚಿವ ಸಚಿವ ಸಂಪುಟದ ಸದಸ್ಯರಿಗೆ ಮತ್ತು ಸಹಕರಿಸಿದ ಶಾಸಕರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ಎನ್. ಮಹೇಂದ್ರಸ್ವಾಮಿ ಶಿವನಿ, ರಾಮು ಎನ್.ಆರ್ ಪುರ, ರವಿಶಂಕರ್ ಯಳ್ಳಂಬಳಸೆ, ಲೋಕೇಶ್ ಮೇಲನಹಳ್ಳಿ, ಸಂಜೀವ್ ಕಳಸ, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಪವಿತ್ರ ಎನ್.ಆರ್ ಉಪಸ್ಥಿತರಿದ್ದರು.
Dasams congratulates government on internal reservation announcement
Leave a comment