ಚಿಕ್ಕಮಗಳೂರು: ವಸತಿ ನಿಲಯಗಳ ಸುತ್ತಮುತ್ತ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆಗೊಳಿಸಿ ಸ್ವಚ್ಛತೆ ಕಾಪಾಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎಸ್.ಸೀಮಾ ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆಯ ಪ್ರಯುಕ್ತ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ವಸತಿ ನಿಲಯ ಪಾಲಕರಿಗೆ ಇಂದು ಆಯೋಜಿಸಿದ್ದ ಡೆಂಗ್ಯೂ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಡೆಂಗ್ಯೂ, ಮಲೇರಿಯಾ, ಚಿಕೂನ್ ಗುನ್ಯದಂತಹ ರೋಗಗಳು ಮಳೆಗಾಲದಲ್ಲಿ ಅತೀ ಹೆಚ್ಚಾಗಿ ಕಂಡು ಬಂದಿರುವುದರಿಂದ ನಿಂತ ನೀರನ್ನು ಸರಾಗವಾಗಿ ಹರಿಯುವಂತೆ ಮಾಡುವುದು ಅಗತ್ಯ. ನೀರಿನ ಎಲ್ಲಾ ಪರಿಕರಗಳನ್ನು ಸಮರ್ಪಕವಾಗಿ ಮುಚ್ಚಿಡುವುದರಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು. ಜೊತೆಗೆ ಎಲ್ಲಾ ವಸತಿ ನಿಲಯಗಳಲ್ಲಿ ಸೊಳ್ಳೆ ಪರದೆ ಮತ್ತು ಮೆಶ್ಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಶಶಿಕಲಾ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳನ್ನು ಒಳಗೊಂಡಂತೆ ತಂಡಗಳನ್ನಾಗಿ ಮಾಡಿ ಲಾರ್ವಾ ಸಮೀಕ್ಷೆ ನಡೆಸಲಾಗುತ್ತಿದೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸುವ ಬಗ್ಗೆ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ದೇವರಾಜ್ ಮಾತನಾಡಿ, ಡೆಂಗ್ಯೂ ನಿಯಂತ್ರಣ ಮತ್ತು ಇಲಾಖಾವಾರು ಅನುಸರಿಸಬೇಕಾದ ಜವಾಬ್ದಾರಿಗಳ ಬಗ್ಗೆ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ವಸತಿ ನಿಲಯ ಪಾಲಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಎನ್.ಬೇಬಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್, ತಾಲ್ಲೂಕು ಆಶಾ ಮೇಲ್ವಿಚಾರಕಿ ಕಲಾಧರೆ, ತಾಲ್ಲೂಕು ವ್ಯಾಪ್ತಿಯ ವಸತಿ ನಿಲಯಗಳ ನಿಲಯಪಾಲಕರು ಭಾಗವಹಿಸಿದ್ದರು.
Maintain cleanliness around the dormitories.
Leave a comment