ಚಿಕ್ಕಮಗಳೂರು: ನಗರಸಭೆ ೩೫ನೇ ವಾರ್ಡಿನ ಕೆಂಪನಹಳ್ಳಿ ಬಡಾವಣೆಯ ಬಿಜೆಪಿ ಸದಸ್ಯೆ ಲಲಿತಾ ರವಿನಾಯ್ಕ ನಗರಸಭೆ ನೂತನ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಸುದರ್ಶನ್ ಘೋಷಿಸಿದರು.
ಅವರು ಇಂದು ನಗರಸಭೆಯಲ್ಲಿ ಪಕ್ಷದ ತೀರ್ಮಾನದಂತೆ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನು ನಿಗಧಿಪಡಿಸಲಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಬೇರೆ ಯಾವ ಸದಸ್ಯರಿಂದ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಲಲಿತಾ ರವಿನಾಯ್ಕ ಅವರನ್ನು ನೂತನ ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಗಿದೆ ಎಂದು ಘೋಷಿಸಿದರು.
ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅನುಸೂಚಿತ ಸಮುದಾಯದ ಲಂಬಾಣಿ ಜನಾಂಗಕ್ಕೆ ಸೇರಿದ ಲಲಿತಾ ರವಿನಾಯ್ಕ ಅವರು ಸರ್ವಾನುಮತದಿಂದ ನಗರಸಭೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರಿಗೆ ಶುಭ ಹಾರೈಸುತ್ತೇನೆ ಎಂದರು.
ಸಿಕ್ಕಿರುವ ಅಧಿಕಾರವಧಿಯಲ್ಲಿ ಒಳ್ಳೆಯ ಕೆಲಸದ ಮೂಲಕ ಆ ಭಾಗದ ತಮ್ಮ ವಾರ್ಡಿನಲ್ಲಿಯೂ ಹೆಸರು ಪಡೆದು ಬಿಜೆಪಿ ಪಕ್ಷದಲ್ಲೂ ಕೆಲಸ ಮಾಡುತ್ತ ಎಲ್ಲರ ಸರ್ವ ಸಮ್ಮತಿಯ ಮೇರೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆಂದು ಹೇಳಿದರು.
ಹಾಲಿ ಅಧ್ಯಕ್ಷೆ ಶೀಲಾ ದಿನೇಶ್ ಹಾಗೂ ಲಲಿತಾ ರವಿನಾಯ್ಕರ ಜೋಡಿ ಜೋಡೆತ್ತಿನ ರೀತಿ ನಗರದ ಅಭಿವೃದ್ಧಿಗೆ ಕಾಯಕಲ್ಪ ಕೊಡಲಿ ಎಂದ ಅವರು, ಹಾಲಿ ಸ್ವಚ್ಚ ನಗರ ಎಂದು ಹೆಸರು ಮುಂದುವರೆಯುವಂತೆ ನೋಡಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.
ಅಭಿವೃದ್ಧಿಯಲ್ಲಿ ದಾಪುಗಾಲು ಇಡುವುದರ ಜೊತೆಗೆ ಜನಸ್ನೇಹಿ ಆಡಳಿತಕ್ಕೆ ನಾಂದಿಯಾಗಲಿ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಸ್ನೇಹಿತರಂತೆ ಸಾರ್ವಜನಿಕರ ಕೆಲಸ ಮಾಡಿಕೊಡಿ ಎಂದು ಹೇಳಿದರು.
ತಾವು ಶಾಸಕರಾಗಿದ್ದಾಗ ಎಸ್‌ಎಫ್‌ಸಿ ಯೋಜನೆಯಡಿ ವಿಶೇಷ ಅನುದಾನ ತಂದು ೧೫ನೇ ಹಣಕಾಸು ಹಾಗೂ ವಾರ್ಷಿಕ ಅನುದಾನದ ಜೊತೆಗೆ ನಾಲ್ಕು ಪಟ್ಟು ವಿಶೇಷ ಅನುದಾನ ತರುತ್ತಿದ್ದೆವು. ಇದರಿಂದ ನಗರದ ಅಭಿವೃದ್ಧಿಗೆ ಸಹಕಾರವಾಗುತ್ತಿತ್ತು. ವಿಶೇಷ ಅನುದಾನ ಕೋರಿ ಸರ್ಕಾರದ ಬಳಿಗೆ ಸರ್ವ ಪಕ್ಷದ ಮುಖಂಡರ ನಿಯೋಗ ಹೋಗುವುದಾದರೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಅಹ್ವಾನಿಸಿದರೆ ಬರಲು ಸಿದ್ದವಿರುವುದಾಗಿ ಭರವಸೆ ನೀಡಿದರು.
ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಸ್ವಚ್ಚ ನಗರ ಮತ್ತು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ನಮ್ಮೊಂದಿಗೆ ನೂತನ ಉಪಾಧ್ಯಕ್ಷೆ ಲಲಿತಾ ಸಹಕರಿಸುವಂತೆ ವಿನಂತಿಸಿ ಶುಭ ಹಾರೈಸಿದರು. ನಗರದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದ ಅವರು, ವಿಶೇಷ ಅನುದಾನ ತರಲು ಆಹ್ವಾನಿಸಿದರೆ ಭಾಗವಹಿಸುವುದಾಗಿ ತಿಳಿಸಿದರು.
ನೂತನ ಉಪಾಧ್ಯಕ್ಷೆ ಲಲಿತಾ ರವಿನಾಯ್ಕ ಮಾತನಾಡಿ, ನನ್ನನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆಮಾಡಿದ ಸರ್ವರಿಗೂ ಹಾಗೂ ೩೫ ವಾರ್ಡ್‌ಗಳ ಸದಸ್ಯರಿಗು, ಪಕ್ಷದ ಮುಖಂಡರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆಂದು ಹೇಳಿದರು.
ಎಲ್ಲರ ವಿಶ್ವಾಸ ಪಡೆದು ನಗರಸಭೆ ಅಧ್ಯಕ್ಷರೊಂದಿಗೆ ಸೇರಿ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಟಿ.ರಾಜಶೇಖರ್, ವರಸಿದ್ಧಿ ವೇಣುಗೋಪಾಲ್, ಉಮಾದೇವಿ ಕೃಷ್ಣಪ್ಪ, ಕವಿತಶೇಖರ್, ಇಂದಿರಾಶಂಕರ್, ವಿದ್ಯಾಬಸವರಾಜ್, ಮಧುಕುಮಾರ್ ರಾಜ್ ಅರಸ್, ಸುಜಾತ ಶಿವಕುಮಾರ್, ಸಿ.ಎಂ ಕುಮಾರ್, ಎ.ಸಿ ಕುಮಾರೇಗೌಡ, ರೂಪಕುಮಾರ್, ಗೋಪಿ, ಅನುಮಧುಕರ್, ಮಣಿಕಂಠ, ರಾಜು, ಅಮೃತೇಶ್ ಚೆನ್ನಕೇಶವ, ದೀಪ ರವಿಕುಮಾರ್, ಭವ್ಯ ಮಂಜುನಾಥ್, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ, ಮುಖಂಡರುಗಳಾದ ಕೋಟೆ ರಂಗನಾಥ್, ಕುರುವಂಗಿ ವೆಂಕಟೇಶ್, ಕನಕರಾಜ್ ಅರಸ್, ಕೇಶವಮೂರ್ತಿ, ಹಂಪಯ್ಯ, ಶಂಕರ್ ಮತ್ತಿತರರು ಉಪಸ್ಥಿತರಿದ್ದರು.
Lalita Ravinayaka elected unopposed as new Vice President of Municipal Council
Leave a comment