ಚಿಕ್ಕಮಗಳೂರು: ಗಣೇಶ ಚತುರ್ಥಿಯ ಸಂದರ್ಭ ಗಿರಿ ಭಾಗದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಗ್ರಾಮಸ್ಥರು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದರಿಂದ ಗಿರಿ ಭಾಗದ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ಪ್ರದೇಶಗಳಿಗೆ ಭೇಟಿ ನೀಡಲು ಉದ್ದೇಶಿಸಿರುವ ಪ್ರವಾಸಿಗರು, ತಮ್ಮ ಪ್ರವಾಸವನ್ನು ಮುಂದೂಡುವಂತೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಜಿಲ್ಲಾಡಳಿತ ಮನವಿ ಮಾಡಿದೆ.
ಆಗಸ್ಟ್ ೨೭ರ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಕಸಬಾ ಹೋಬಳಿ, ವಸ್ತಾರೆ, ಆವತಿ, ಅಂಬಳೆ ಮತ್ತು ಜಾಗರ ಹೋಬಳಿಯ ೪೦ಕ್ಕೂ ಹೆಚ್ಚು ಗ್ರಾಮಗಳ ಗ್ರಾಮಸ್ಥರು ಶ್ರೀ ಮೇಲು ಗದ್ದುಗೆ ಮುಳ್ಳಯ್ಯನಗಿರಿ, ಶ್ರೀ ಸೀತಾಳಯ್ಯನಗಿರಿ ಮತ್ತು ಶ್ರೀ ಗುರು ನಾರುಕಂತೆ ಮಠಗಳಿಗೆ ತೆರಳಿ ಚೌತಿ ಕಾಯಿ ಒಡೆಸಿ ಹಣ್ಣು ಕಾಯಿ ಮಾಡಿಸಿಕೊಂಡು ಬರುವುದು ನೂರಾರು ವರ್ಷಗಳ ಪಾರಂಪರಿಕ ಆಚರಣೆ.
ಮೇಲ್ಕಾಣಿಸಿದ ದಿನದಲ್ಲಿ ಸಾರ್ವತ್ರಿಕ ರಜೆ ಇರುವ ಕಾರಣ, ಚಿಕ್ಕಮಗಳೂರು ತಾಲ್ಲೂಕಿನ ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಶ್ರೀ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಐ.ಡಿ.ಪೀಠ, ಮಾಣಿಕ್ಯಧಾರ ಇತ್ಯಾದಿ ಪ್ರವಾಸಿ ತಾಣಗಳಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವ ನಿರೀಕ್ಷೆ ಇದೆ.
ಈ ಮಾರ್ಗಗಳಲ್ಲಿ ಕಿರಿದಾದ ರಸ್ತೆಗಳಿದ್ದು, ಜನ ಹಾಗೂ ವಾಹನಗಳ ದಟ್ಟಣೆ ಉಂಟಾಗಿ ಅಪಘಾತಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಈ ಮಾರ್ಗದಲ್ಲಿ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಮುಂಗಡವಾಗಿ ಕೊಠಡಿಗಳನ್ನು ಕಾಯ್ದಿರಿಸಿರುವ ಪ್ರವಾಸಿಗರನ್ನು ಹೊರತುಪಡಿಸಿ, ಉಳಿದವರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಅವರು ಗಮನ ಸೆಳೆದಿದ್ದಾರೆ.
District administration appeals to tourists to postpone hill trips
Leave a comment