ಚಿಕ್ಕಮಗಳೂರು: ಮರ್ಲೆ ಹೊಸಳ್ಳಿಯಲ್ಲಿ ಕಾನೂನುಬಾಹಿರವಾಗಿ ನಡೆಸುತ್ತಿರುವ ಖಾಸಗಿ ಸ್ಟೋನ್ ಕ್ರಷರ್ ರದ್ದುಪಡಿಸಲು ೧೫ ದಿನ ಗಡುವು ನೀಡಿ ನಂತರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಈಗ ಮೌನವಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮರ್ಲೆ ಹೊಸಳ್ಳಿ ಗ್ರಾಮದ ರೈತ ಮಹಿಳೆ ಕಲ್ಪನಾ ದೂರಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಣಿಗಾರಿಕೆ ನಿಯಮಗಳಿಗೆ ವಿರುದ್ಧವಾಗಿ ಮರ್ಲೆ ಹೊಸಳ್ಳಿ ಸಮೀಪ ಕಲ್ಲುಗಣಿಗಾರಿಕೆ ನಡಸಲಾಗುತ್ತಿದೆ. ಗ್ರಾಮಸ್ಥರ ಜಮೀನುಗಳು ೫೦ ಮೀಟರ್ ಅಂತರದಲ್ಲಿದ್ದು, ಧೂಳು, ಕಲ್ಲಿನ ಚೂರುಗಳು, ಕಲುಷಿತ ನೀರು ಜಮೀನಿಗೆ ಆವರಿಸುತ್ತಿದೆ ಎಂದು ಆರೋಪಿಸಿದರು.
ಜಮೀನಲ್ಲಿ ಕೆಲಸಮಾಡಲು ಭಯವಾಗುತ್ತಿದೆ. ಕಲ್ಲು ಸ್ಪೋಟಿಸುವ ಶಬ್ದದಿಂದ ಕುರಿ, ಹಸುಗಳು ಗರ್ಭಪಾತವಾಗಿ ಸಾವನ್ನಪ್ಪಿವೆ. ಕೃಷಿ, ಹೈನುಗಾರಿಕೆಯನ್ನೇ ಪ್ರಧಾನವಾಗಿ ಮಾಡಿಕೊಂಡು ಬದುಕುತ್ತಿರುವ ನಮಗೆ ಗಣಿಗಾರಿಕೆಯಿಂದ ಬದುಕೇ ದುಸ್ತರವಾಗಿದೆ. ಸಾಲಬಾಧೆಯಿಂದ ಕಾಲ ತಳ್ಳುತ್ತಿದ್ದೇವೆ ಎಂದು ನೊಂದು ನುಡಿದರು.
ಈ ಬಗ್ಗೆ ತಾವು ಮತ್ತು ಗ್ರಾಮಸ್ಥರು ಸ್ಟೋನ್ ಕ್ರಷರ್ ಮಾಲೀಕರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು ವಿಚಾರಣೆಯಲ್ಲಿದೆ ಎಂದು ಹೇಳಿದರು.
ಈ ನಡುವೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ನ್ಯಾಯಕೊಡಿಸುವುದಾಗಿ ಹೇಳಿ ನಮ್ಮನ್ನು ನಂಬಿಸಿದರು. ನಮ್ಮಿಂದ ಎಲ್ಲ ದಾಖಲೆಗಳನ್ನು ಪಡೆದು ಸ್ಥಳಪರಿಶೀಲನೆ ಮಾಡಿ, ಸ್ಟೋನ್ ಕ್ರಷರ್ ಮಾಲೀಕರ ವಿರುದ್ಧ ಘೋಷಣೆ ಕೂಗಿದರು. ಕಲ್ಲುಗಣಿಗಾರಿಕೆ ಅಕ್ರಮ, ಕಾನೂನುಬಾಹಿರ ಎಂದು ತಿಳಿಸಿ ಸ್ಥಳದಿಂದ ತೆರಳಿದ್ದರು ಎಂದು ತಿಳಿಸಿದರು.
ಜು.೨೯ ಕ್ಕೆ ಜಿಲ್ಲಾ ಕೇಂದ್ರಕ್ಕೆ ಬಂದು ಸುದ್ದಿಗೋಷ್ಠಿ ನಡೆಸಿ ಕಾನೂನು ಬಾಹಿರವಾಗಿ ನಡೆಸುತ್ತಿರುವ ಕಲ್ಲುಗಣಿಗಾರಿಕೆಯನ್ನು ಮುಂದಿನ ೧೫ ದಿನದೊಳಗೆ ಸ್ಥಗಿತಗೊಳಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.
ಆದರೆ, ಗಣಿಗಾರಿಕೆ ನಿಲ್ಲಲಿಲ್ಲ. ಅವರ ಗಡವೂ ಮುಗಿಯಿತು. ಅವರು ಹೇಳಿದಂತೆ ಆ.೧೨ ರಂದು ಗಣಿಗಾರಿಕೆ ಪ್ರದೇಶಕ್ಕೆ ಬಂದು ಪ್ರತಿಭಟನೆ ನಡೆಸಬೇಕಿತ್ತು. ತಮಗೆ ಬರುವುದಾಗಿ ಹೇಳಿ ೧೦೦ ಮಂದಿಗೆ ಊಟ ಮಾಡಿಸಿ ಎಂದು ಹೇಳಿದ್ದರು. ಆದರೆ ಯಾರೂ ಬರಲಿಲ್ಲ. ಫೋನಾಯಿಸಿದರೆ ಉಡಾಫೆ ಉತ್ತರ ನೀಡಿದ್ದಾರೆ. ರೈತ ಸಂಘದ ಅಧ್ಯಕ್ಷ, ಪದಾಧಿಕಾರಿಗಳ ಈ ನಡೆಯಿಂದ ನಮ್ಮ ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.
ಜತೆಗೆ ಸ್ಟೋನ್ ಕ್ರಷರ್ ಮಾಲೀಕರು ಮತ್ತು ವಿಧಾನ ಪರಿಷತ್ ಸದಸ್ಯರ ಕೆಂಗಣ್ಣಿಗೆ ಗುರಿಯಾಗುವಂತಾಗಿದೆ. ಈ ರೀತಿ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿ ರೈತ ಸಂಘದವರು ಮೌನವಾಗಿರುವುದರ ಹಿಂದಿನ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿ, ಗಣಿಗಾರಿಕೆ ಮಾಲೀಕರೊಂದಿಗೆ ಇವರೇನಾದರು ಶಾಮೀಲಾದರೇ ಎಂಬ ಅನುಮಾನ ಮೂಡುತ್ತಿದೆ ಎಂದು ಆರೋಪಿಸಿದರು.
ಮರ್ಲೆ ಹೊಸಳ್ಳಿ ಗ್ರಾಮಸ್ಥರಿಗೆ ನ್ಯಾಯ ಕೊಡಿಸುವ ಇಚ್ಛಾಶಕ್ತಿ ರೈತ ಸಂಘದ ಮುಖಂಡರಿಗೆ ಇದ್ದಲ್ಲಿ ಕೂಡಲೇ ಅವರು ಆಡಿದಂತೆ ಹೋರಾಟ ಮಾಡಿ ತೋರಿಸಬೇಕು. ಇಲ್ಲದಿದ್ದರೆ ಹಸಿರು ಶಾಲು ತೆಗೆದಿಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
15-day deadline to cancel private stone crusher
Leave a comment