ಚಿಕ್ಕಮಗಳೂರು: – ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಯಾಗಿ ರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ. ಪ್ರಕಾಶ್ ಮಣಿಜೀಯವರ ೧೮ನೇ ಪುಣ್ಯ ಸ್ಮೃತಿ ದಿನದ ಅಂಗವಾಗಿ ಬೃಹತ್ ರಕ್ತದಾನ ಅಭಿಯಾನ-೨೦೨೫ನ್ನು ಆ.೨೪ ರಂದು ಭಾನುವಾರ ಬೆಳಗ್ಗೆ ೯.೩೦ ರಿಂದ ಸಂಜೆ ೪.೩೦ ರವರೆಗೆ ನಗರದ ಟಿಎಂಎಸ್ ಆವರಣದ ರೋಟರಿ ಹಾಲ್‌ನಲ್ಲಿ ಏರ್ಪಡಿಸಲಾಗಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪ್ರಜಾಪಿತಾ ಬ್ರಹ್ಮಕುಮಾರೀಸ್ ಸಂಚಾಲಕಿ ರಾಜಯೋಗಿನಿ ಬಿ.ಕೆ. ಭಾಗ್ಯಕ್ಕ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ನೆರೆವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ನಗರಸಭಾಧ್ಯಕ್ಷೆ ಶೀಲಾದಿನೇಶ್ ವಹಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ, ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್, ರೋಟರಿ ಸಂಸ್ಥೆಯ ಅಧ್ಯಕ್ಷ ಲಿಖಿತ್ ಎನ್.ಪಿ. ಹೋಲಿಕ್ರಾಸ್ ಆಸ್ಪತ್ರೆಯ ಆಡಳಿತಾಧಿಕಾರಿ ಲೂಸೀಜಾನ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರದೀಪ್‌ಗೌಡ, ಜೆಸಿಐ ಅಧ್ಯಕ್ಷ ಪ್ರದೀಪ್ ಕೋಟೆ, ಜಿಲ್ಲಾಧ್ಯಕ್ಷ ಡಾ. ಕೆ.ಎ. ಅನಿತ್ ಕುಮಾರ್ ಭಾಗವಹಿಸಲಿದ್ದಾರೆಂದು ಹೇಳಿದರು.
ಬ್ರಹ್ಮಕುಮಾರೀಸ್ ಸಂಸ್ಥೆ ಇಂದು ವಿಶ್ವದಾದ್ಯಂತ ೧೪೭ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯಾಪಕವಾಗಿ ತನ್ನ ಸೇವೆಯನ್ನು ವಿಸ್ತರಿಸಿದ್ದು, ೧೯೩೬-೧೯೬೯ ರವರೆಗೆ ಸಂಸ್ಥೆಯನ್ನು ನಡೆಸಿ ೧೮.೦೧.೧೯೬೯ ರಂದು ತಮ್ಮ ಸಂಪೂರ್ಣತೆಯನ್ನು ಪಡೆದು ಡಾ. ದಾದಿ ಪ್ರಕಾಶ್ ಮಣಿಜೀ ಅವರು ಅವ್ಯಕ್ತರಾದರು ಎಂದು ತಿಳಿಸಿದರು.
ದಾದಿಜೀ ಅವರಿಗೆ ವಿಶ್ವಸಂಸ್ಥೆ ೬ ಬಾರಿ ‘ಶಾಂತಿದೂತ’ ಬಿರುದನ್ನು ನೀಡಿ ಗೌರವಿಸಿದೆ. ಉದಯಪುರ ಮೋಹನ್‌ಲಾಲ್ ಸುಕಾಡಿಯಾ ವಿಶ್ವವಿದ್ಯಾಲಯ ಇವರನ್ನು ಗುರುತಿಸಿ ಡಾಕ್ಟರೇಟ್ ನೀಡಿ ಗೌರವಿಸಿದೆ ಎಂದು ಹೇಳಿದರು.
ಆ.೨೨ ರಿಂದ ೨೫ ರವರೆಗೆ ಭಾರತ ಮತ್ತು ನೇಪಾಳದಲ್ಲಿ ಬೃಹತ್ ರಕ್ತದಾನ ಅಭಿಯಾನವನ್ನು ಆಯೋಜಿಸಲಾಗಿದ್ದು, ಅದರ ಭಾಗವಾಗಿ ಜಿಲ್ಲೆಯ ತರೀಕೆರೆಯಲ್ಲಿ ಆ.೨೨ ರಂದು, ಮೂಡಿಗೆರೆಯಲ್ಲಿ ಆ.೨೩, ಚಿಕ್ಕಮಗಳೂರು ನಗರದಲ್ಲಿ ಆ.೨೪ ರಂದು ರಕ್ತದಾನ ಅಭಿಯಾನ ನಡೆಯಲಿದೆ ಎಂದರು.
ರೋಟರಿ, ರೆಡ್‌ಕ್ರಾಸ್, ಜೆಸಿಐ, ಲಯನ್ಸ್, ಹೋಲಿಕ್ರಾಸ್ ಆಸ್ಪತ್ರೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವೇಕ ಜಾಗೃತಿ ಬಳಗ, ಭೂಮಿಕ ಟಿವಿ, ಕನ್ನಡ ಸೇನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅನುವ್ರತ್ ಸಮಿತಿ, ಕನ್ನಡ ಜಾನಪದ ಪರಿಷತ್ ಇವರುಗಳ ಸಂಯುಕ್ತಾಶ್ರಯದಲ್ಲಿ ಅಭಿಯಾನವನ್ನು ಆಯೋಜಿಸಲಾಗಿದೆ ಎಂದರು.
ವಿದ್ಯಾರ್ಥಿ ಯುವಜನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬೃಹತ್ ರಕ್ತದಾನ ಅಭಿಯಾನದಲ್ಲಿ ಪಾಲ್ಗೊಂಡು ರಕ್ತದಾನ ಮಾಡುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ. ಅನಿತ್‌ಕುಮಾರ್, ಜಿ.ರಮೇಶ್, ನಂದಕುಮಾರ್, ಗೋಪಿಕೃಷ್ಣ, ಬಿ.ಎನ್. ವೆಂಕಟೇಶ್, ಲಿಖಿತ್ ಎನ್.ಪಿ ಮತ್ತಿತರರು ಉಪಸ್ಥಿತರಿದ್ದರು
Massive blood donation drive at Rotary Hall on August 24
Leave a comment